ಪಾಟ್ನಾ : 'ಬಿಹಾರ'ದ ಮಾಜಿ ಮುಖ್ಯಮಂತ್ರಿ, ಜೆಡಿಯು ನಾಯಕ ನಿತೀಶ್ ಕುಮಾರ್, ಮತ್ತೊಮ್ಮೆ ಮುಖ್ಯಮಂತ್ರಿಯಾಗಿ ಪದಗ್ರಹಣ ಮಾಡಲಿದ್ದಾರೆ.
ಫೆ.22ರಂದು ರಾಜಭವನದಲ್ಲಿ ನಿತೀಶ್ ಕುಮಾರ್ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ. ಫೆ.20ರಂದು ಬಿಹಾರ ಮುಖ್ಯಮಂತ್ರಿ ಜಿತನ್ ರಾಮ್ ಮಾಂಝಿ ರಾಜೀನಾಮೆ ನೀಡಿದ ಹಿನ್ನೆಲೆಯಲ್ಲಿ ರಾಜ್ಯಪಾಲರನ್ನು ಭೇಟಿ ಮಾಡಿದ್ದ ನಿತೀಶ್ ಕುಮಾರ್ ಸರ್ಕಾರ ರಚನೆಗೆ ಅನುಮತಿ ನೀಡುವಂತೆ ಮನವಿ ಮಾಡಿದ್ದರು.
ರಾಜ್ಯಪಾಲರನ್ನು ಭೇಟಿ ಮಾಡಿದ ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ನಿತೀಶ್ ಕುಮಾರ್, ಸರ್ಕಾರ ರಚನೆಗೆ ರಾಜ್ಯಪಾಲರು ಆಹ್ವಾನ ನೀಡಿದ್ದು, ಫೆ. 22ರಂದು ಪ್ರಮಾಣವಚನ ಸ್ವೀಕರಿಸುವುದಾಗಿ ಹೇಳಿದ್ದಾರೆ.
ಬಹುಮತ ಸಾಬೀತು ಪಡಿಸಲು ರಾಜ್ಯಪಾಲರು 3 ವಾರಗಳ ಕಾಲಾವಕಾಶ ನೀಡಿದ್ದು, ಮಾರ್ಚ್ 16ರೊಳಗೆ ಬಹುಮತ ಸಾಬೀತಿಗೆ ಕೊನೆಯ ದಿನ ಎಂದು ತಿಳಿಸಿದ್ದಾರೆ.
ತಮ್ಮ ನೇತೃತ್ವದ ಸರ್ಕಾರಕ್ಕೆ, ಆರ್.ಜೆ.ಡಿ, ಕಾಂಗ್ರೆಸ್, ಸಿಪಿಐ ಪಕ್ಷದ ಶಾಸಕರ ಬೆಂಬಲ ಇದ್ದು ವಿಶ್ವಾಸಮತ ಸಾಬೀತುಪಡಿಸುವುದಾಗಿ ನಿತೀಶ್ ಕುಮಾರ್ ವಿಶ್ವಾಸ ವ್ಯಕ್ತಪಡಿಸಿದ್ದಾರೆ.