ಬೆಂಗಳೂರು : ತುಮಕೂರಿನ ಕೈಗಾರಿಕಾ ಪ್ರದೇಶದಲ್ಲಿ 610 ಎಕರೆ ವಿಸ್ತೀರ್ಣದಲ್ಲಿ ದೇಶೀಯ ನಿರ್ಮಿತ ಹೆಲಿಕಾಫ್ಟರ್ ಉತ್ಪಾದನಾ ಘಟಕ ಪ್ರಾರಂಭಿಸಲು ಹೆಚ್.ಎ.ಎಲ್ ನಿರ್ಧರಿಸಿದೆ. ಇದಕ್ಕಾಗಿ ರಾಜ್ಯಸರ್ಕಾರ 610 ಎಕರೆ ಜಾಗ ಮಂಜೂರು ಮಾಡಿದೆ.
ತುಮಕೂರಿನ ಘಟಕದಲ್ಲಿ ವಾರ್ಷಿಕ 60 ಹೆಲಿಕಾಪ್ಟರ್ ಗಳನ್ನು ಉತ್ಪಾದಿಸುವ ಗುರಿ ಹೊಂದಲಾಗಿದೆ ಎಂದು ಎಚ್.ಎ.ಎಲ್ ಅಧ್ಯಕ್ಷ ಟಿ. ಸುವರ್ಣರಾಜು ಸುದ್ದಿಗೋಷ್ಠಿಯಲ್ಲಿ ತಿಳಿಸಿದ್ದಾರೆ. ಆರಂಭದಲ್ಲಿ 400 ಕೋಟಿ ವೆಚ್ಚದಲ್ಲಿ ಅಭಿವೃದ್ಧಿ ಕಾಮಗಾರಿಗಳನ್ನು ಕೈಗೆತ್ತಿಕೊಳ್ಳಲಾಗಿದ್ದು ಲಘು ಹೆಲಿಕಾಪ್ಟರ್ ಗಳನ್ನು ತಯಾರಿಸಲಾಗುವುದು ಎಂದು ತಿಳಿಸಿದ್ದಾರೆ.
2020ರ ವೇಳೆಗೆ ಹೆಚ್.ಎ.ಎಲ್ 400-600 ಹೆಲಿಕಾಪ್ಟರ್ ಗಳನ್ನು ಪ್ರತಿವರ್ಷ ಉತ್ಪಾದಿಸುವ ಗುರಿ ಹೊಂದಿದೆ ಇದರಲ್ಲಿ ರಕ್ಷಣಾ ಇಲಾಖೆಗೆ ಸಂಬಂಧಿಸಿದ ಹೆಲಿಕಾಪ್ಟರ್ಗಳು ಹಾಗೂ ನಾಗರಿಕ ಬಳಕೆಯ ವಿಮಾನಗಳು ಸೇರಿವೆ ಎಂದು ಸುವರ್ಣರಾಜು ತಿಳಿಸಿದ್ದಾರೆ.
2015 ಹೆಚ್.ಎ.ಎಲ್ ಗೆ ವಿಶೇಷವಾದ ವರ್ಷ, ಈ ವರ್ಷ ಹೆಚ್.ಎ.ಎಲ್ 75 ವರ್ಷಗಳಿಗೆ ಕಾಲಿಡುತ್ತಿರುವುದು ಹೆಮ್ಮೆಯ ಸಂಗತಿ. ದೇಶದ ರಕ್ಷಣೆಗೆ ಬೇಕಾದ ಅಗತ್ಯ ಹೆಲಿಕಾಪ್ಟರ್ ಹಾಗೂ ಏರ್ ಕ್ರಾಫ್ಟ್ ಗಳನ್ನು ಒದಗಿಸುವಲ್ಲಿ ಪ್ರಮುಖ ಪಾತ್ರವಹಿಸಿದೆ ಎಂದು ಹೇಳಿದರು. ಪತ್ರಿಕಾಗೋಷ್ಠಿಯಲ್ಲಿ. ಎ.ಕೆ. ಮಿಶ್ರಾ, ಕೆ. ನರೇಶ್ ಬಾಬು, ಸಡಗೋಪನ್ ಸೇರಿದಂತೆ ಹಲವರು ಉಪಸ್ಥಿತರಿದ್ದರು.