ರಾಯ್ ಪುರ : ಹಿಂಸಾಚಾರ ಯಾವುದೇ ಸಮಸ್ಯೆಗಳಿಗೂ ಪರಿಹಾರವಲ್ಲ. ನಕ್ಸಲರು ಮಕ್ಕಳಿಗೆ ಬಂದೂಕು ಕೊಡುತ್ತಿದ್ದರು, ಆದರೆ ಸರ್ಕಾರ ಅವರ ಕೈಗಳಿಗೆ ಪೆನ್ ನೀಡಿದೆ. ಆ ನಿಟ್ಟಿನಲ್ಲಿ ಛತ್ತೀಸ್ ಗಢದಲ್ಲೂ ನಕ್ಸಲ್ ಸಮಸ್ಯೆ ಕಡಿಮೆಯಾಗಲಿದೆ ಎಂದು ಪ್ರಧಾನಿ ನರೇಂದ್ರ ಮೋದಿ ವಿಶ್ವಾಸವ್ಯಕ್ತಪಡಿಸಿದ್ದಾರೆ.
ಛತ್ತೀಸ್ ಗಢದ ನಕ್ಸಲ್ ಪೀಡಿತ ದಾಂತೇವಾಡಾ ಜಿಲ್ಲೆಯಲ್ಲಿ ಅಲ್ಟ್ರಾ ಮೆಗಾ ಉಕ್ಕು ಉತ್ಪಾದನಾ ಘಟಕ ಉದ್ಘಾಟಿಸಿ ಮಾತನಾಡಿದ ಪ್ರಧಾನಿ, ಇಲ್ಲಿಗೆ ಭೇಟಿ ನೀಡಿರುವುದು ನನ್ನ ಭಾಗ್ಯ. ಬಸ್ತಾರ್ ಇತಿಹಾಸದಲ್ಲೇ ಇದೇ ಮೊದಲ ಬಾರಿಗೆ ಇಷ್ಟೊಂದು ದೊಡ್ಡ ಮಟ್ಟದ ಯೋಜನೆಗೆ ಚಾಲನೆ ದೊರೆಯುತ್ತಿದೆ. ಕೇವಲ ಒಂದ ಗಂಟೆಯೊಳಗೆ 24 ಸಾವಿರ ಕೋಟಿ ರೂಪಾಯಿ ವೆಚ್ಚದ ಯೋಜನೆಗೆ ಸಹಿ ಹಾಕಲಾಗಿದೆ ಎಂದರು.
ಹಿಂಸಾಚಾರಕ್ಕೆ ಯಾವುದೇ ಭವಿಷ್ಯವಿಲ್ಲ, ಭವಿಷ್ಯ ಇರುವುದು ಶಾಂತಿಯಲ್ಲಿ. ಹೆಗಲ ಮೇಲೆ ಬಂದೂಕಿನ ಬದಲು ಸಮಸ್ಯೆಗೆ ಪರಿಹಾರ ಕಂಡುಕೊಳ್ಳಬೇಕಿದೆ ಎಂದು ನಕ್ಸಲರಿಗೆ ಸಂದೇಶ ರವಾನಿಸಿದರು.