ಪಾಟ್ನಾ : ಫೆ.20ರಂದು ಬಿಹಾರದ ವಿಧಾನಸಭೆಯಲ್ಲಿ ನಡೆಯಲಿರುವ ವಿಶ್ವಾಸಮತ ಯಾಚನೆಯಲ್ಲಿ ಬಿಹಾರ ಮುಖ್ಯಮಂತ್ರಿ ಜಿತನ್ ರಾಮ್ ಮಾಂಝಿ ಗೆ ಬೆಂಬಲ ನೀಡಲು ಬಿಜೆಪಿ ಶಾಸಕರು ನಿರ್ಧರಿಸಿದ್ದಾರೆ.
ಜಿತನ್ ರಾಮ್ ಮಾಂಝಿ ಅವರನ್ನು ಪಕ್ಷದಿಂದ ಉಚ್ಛಾಟಿಸಿದ್ದೂ ಅಲ್ಲದೇ, ಸಿ.ಎಂ ಪದವಿಯಿಂದ ಪದಚ್ಯುತಿಗೊಳಿಸುವ ಮೂಲಕ ಮಹಾದಲಿತರಿಗೆ ಅಪಮಾನ ಮಾಡಿರುವ ಬಿಹಾರದ ಮಾಜಿ ಸಿ.ಎಂ ನಿತೀಶ್ ಕುಮಾರ್ ಗೆ ತಕ್ಕ ಪಾಠ ಕಲಿಸಲು ಬಿಜೆಪಿ ಜಿತನ್ ರಾಮ್ ಮಾಂಝಿಗೆ ಬೆಂಬಲ ವ್ಯಕ್ತಪಡಿಸಲು ನಿರ್ಧರಿಸಿದೆ.
ಈ ಬಗ್ಗೆ ಪ್ರತಿಕ್ರಿಯಿಸಿರುವ ಬಿಜೆಪಿ ನಾಯಕ, ಸುಶೀಲ್ ಕುಮಾರ್ ಮೋದಿ, ಫೆ.19ರ ಸಂಜೆ ಶಾಸಕಾಂಗ ಪಕ್ಷದ ಸಭೆಯಲ್ಲಿ ಈ ಬಗ್ಗೆ ಅಂತಿಮ ತೀರ್ಮಾನ ಕೈಗೊಳ್ಳಲಾಗುವುದು ಎಂದು ಹೇಳಿದ್ದಾರೆ.
ಬಿಜೆಪಿ ಶಾಸಕರ ನಿರ್ಣಯವನ್ನು ಪಕ್ಷದ ಹೈಕಮಾಂಡ್ ಗೆ ತಿಳಿಸಿದ ನಂತರ ಅಧಿಕೃತವಾಗಿ ಬೆಂಬಲ ಘೋಷಿಸುವ ಸಾಧ್ಯತೆ ಇದೆ.
ಬಿಹಾರದ ವಿಧಾನಸಭೆಯಲ್ಲಿ ಬಿಜೆಪಿ 87 ಶಾಸಕರನ್ನು ಹೊಂದಿದೆ. ಒಂದು ವೇಳೆ ವಿಶ್ವಾಸಮತ ಯಾಚನೆಯಲ್ಲಿ ಬಿಜೆಪಿ ಜಿತನ್ ರಾಮ್ ಮಾಂಝಿಗೆ ಬೆಂಬಲ ನೀಡಿದ್ದೇ ಆದಲ್ಲಿ ನಿತೀಶ್ ಕುಮಾರ್ ಗೆ ತೀವ್ರ ಮುಖಭಂಗ ಉಂಟಾಗಲಿದೆ.