ನವದೆಹಲಿ : ದೆಹಲಿ ವಿಧಾನಸಭಾ ಚುನಾವಣೆಯಲ್ಲಿ ಆಮ್ ಆದ್ಮಿ ಪಕ್ಷ 67 ಸ್ಥಾನ ಪಡೆದು ಬಹುತೇಕ ಕ್ಲೀನ್ ಸ್ವೀಪ್ ಮಾಡುವ ಮೂಲಕ ಲೋಕಸಭೆಯಲ್ಲಿ ಕಾಂಗ್ರೆಸ್ಗೆ ಎದುರಾದ ಸ್ಥಿತಿ ಇಲ್ಲಿ ಬಿಜೆಪಿಗಾಗಿದೆ.
ಶಾಸನಸಭೆಗಳಲ್ಲಿ ಅಧಿಕೃತ ಪ್ರತಿಪಕ್ಷ ಸ್ಥಾನಮಾನ ದೊರಕಬೇಕು ಎಂದರೆ ಸದನದ ಒಟ್ಟು ಬಲದ ಶೇ.10ರಷ್ಟು ಸ್ಥಾನವನ್ನು ಹೊಂದಿರಬೇಕು. ಅಂದರೆ ಇಲ್ಲಿ ಪ್ರತಿಪಕ್ಷ ಸ್ಥಾನ ಬೇಕೆಂದರೆ ಬಿಜೆಪಿ 7 ಸ್ಥಾನವನ್ನಾದರೂ ಪಡೆಯಬೇಕಿತ್ತು. ಆದರೆ ಇಲ್ಲಿ ಆಪ್ ನಂತರದ ದೊಡ್ಡ ಪಕ್ಷವಾದ ಬಿಜೆಪಿ ಕೇವಲ 3 ಸ್ಥಾನ ಪಡೆದಿದೆ.
ಆದರೆ, ಪ್ರಜಾಸತ್ತೆ ಎಂಬುದು ಒಮ್ಮತದ ಮೇಲೆ ನಿರ್ಧಾರವಾಗುತ್ತದೆ. ನಾವು ಬಿಜೆಪಿ ರೀತಿ ವರ್ತಿಸಲ್ಲ. 7 ಸ್ಥಾನ ಪಡೆಯದಿದ್ದರೂ ಅವರಿಗೆ ವಿಪಕ್ಷ ಸ್ಥಾನಮಾನ ಮಾನ್ಯತೆ ನೀಡುತ್ತೇವೆ ಎಂದು ಆಪ್ ನಾಯಕ ಕುಮಾರ್ ವಿಶ್ವಾಸ್ ಟ್ವೀಟ್ ಮಾಡಿದ್ದಾರೆ.
ಲೋಕಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷ ಕೇವಲ 44 ಸ್ಥಾನ ಗೆದ್ದಿತ್ತು. ಹೀಗಾಗಿ ವಿಪಕ್ಷ ಮಾನ್ಯತೆ ಸ್ಥಾನಮಾನಕ್ಕೆ ಬೇಕಾದ 54 ಸ್ಥಾನ ಗಳಿಸುವಲ್ಲಿ ಅದು ವಿಫಲವಾಗಿತ್ತು.