ನವದೆಹಲಿ : ರಾಷ್ಟ್ರ ರಾಜಧಾನಿ ದೆಹಲಿ ವಿಧಾನಸಭಾ ಗದ್ದುಗೆಗಾಗಿ ಫೆಬ್ರವರಿ 7ರಂದು ನಡೆದಿದ್ದ ಚುನಾವಣೆಯ ಫಲಿತಾಂಶ ಪ್ರಕಟಣೆಗೆ ಕ್ಷಣಗಣನೆ ಆರಂಭಗೊಂಡಿದೆ. ಬೆಳಿಗ್ಗೆ 8 ಗಂಟೆಗೆ ಮತ ಎಣಿಕೆ ಆರಂಭವಾಗಲಿದ್ದು ಸರಿಸುಮಾರು ಮಧ್ಯಾಹ್ನದ ಹೊತ್ತಿಗೆ ಸ್ಪಷ್ಟ ಫಲಿತಾಂಶ ಹೊರಬೀಳಲಿದೆ.
ನರೇಂದ್ರ ಮೋದಿ ಕೇಂದ್ರದಲ್ಲಿ ಅಧಿಕಾರಕ್ಕೆ ಬಂದ ನಂತರದ ಎಲ್ಲಾ ವಿಧಾನಸಭಾ ಚುನಾವಣೆಗಳಲ್ಲಿ ಗಮನಾರ್ಹ ಸಾಧನೆ ತೋರಿದ್ದ ಬಿಜೆಪಿ ದೆಹಲಿಯಲ್ಲೂ ಈ ಸಾಧನೆಯನ್ನು ಮುಂದುವರೆಸುವುದೇ ಅಥವಾ ಕಳೆದ ಬಾರಿ 49 ದಿನಗಳ ಕಾಲ ಆಡಳಿತ ನಡೆಸಿ ಹಠಾತ್ ರಾಜೀನಾಮೆ ನೀಡಿದ್ದ ಆಮ್ ಆದ್ಮಿ ಪಕ್ಷದ ಅರವಿಂದ್ ಕೇಜ್ರಿವಾಲ್ ಅವರಿಗೇ ಮತ್ತೆ ದೆಹಲಿಯ ಮತದಾರರು ಮಣೆ ಹಾಕುತ್ತಾರೋ ಎಂಬುದಷ್ಟೇ ಸದ್ಯದ ಕುತೂಹಲವಾಗಿದೆ.
ಆದರೆ ಮತದಾನ ಪೂರ್ವದ ಸಮೀಕ್ಷೆಗಳು ಹಾಗೂ ಮತದಾನೋತ್ತರ ಸಮೀಕ್ಷೆಗಳನ್ನು ಆಧರಿಸಿ ದೆಹಲಿಯಲ್ಲಿ ಈ ಬಾರಿ ಮತ್ತೆ ಅರವಿಂದ್ ಕೇಜ್ರಿವಾಲ್ ಅವರೇ ಮುಖ್ಯಮಂತ್ರಿಯಾಗಲಿದ್ದಾರೆ ಎಂಬುದು ರಾಜಕೀಯ ಪಂಡಿತರ ಲೆಕ್ಕಾಚಾರವಾಗಿದೆ.