ಪಾಟ್ನಾ : ಬಿಹಾರ ರಾಜಕೀಯದಲ್ಲಿ ನಾಟಕೀಯ ಬೆಳವಣಿಗೆ ಆರಂಭವಾಗಿದೆ. ವಿಧಾನಸಭೆ ವಿಸರ್ಜನೆಗೆ ಶಿಫಾರಸು ಮಾಡಿದ ಸಿಎಂ ಜೀತನ್ ರಾಂ ಮಾಂಝಿಯವರನ್ನು ಜೆಡಿಯು ಪಕ್ಷದಿಂದ ಉಚ್ಛಾಟನೆ ಮಾಡಲಾಗಿದೆ.
ಪಾಟ್ನಾದಲ್ಲಿ ಜೆಡಿಯು ಮುಖ್ಯಸ್ಥ ಶರದ್ ಯಾದವ್ ನೇತೃತ್ವದಲ್ಲಿ ನಡೆದ ಶಾಸಕಾಂಗ ಪಕ್ಷದ ಸಭೆಯಲ್ಲಿ ಜೆಡಿಯು ಪಕ್ಷದಿಂದ ಮಾಂಝಿ ಅವರನ್ನು ವಜಾ ಮಾಡಲು ನಿರ್ಧಾರ ಕೈಗೊಳ್ಳಲಾಗಿದೆ.
ಅಲ್ಲದೇ ಜೆಡಿಯು ಶಾಸಕಾಂಗ ಪಕ್ಷದ ನೂತನ ನಾಯಕರನ್ನಾಗಿ ನಿತೀಶ್ ಕುಮಾರ್ ಅವರನ್ನು ಆಯ್ಕೆ ಮಾಡಲಾಗಿದೆ. ಒಂದು ವೇಳೆ ರಾಜ್ಯಪಾಲರು ಸಮ್ಮತಿ ನೀಡಿದಲ್ಲಿ ನಿತೀಶ್ ಕುಮಾರ್ ಮತ್ತೊಮ್ಮೆ ಬಿಹಾರದ ಮುಖ್ಯಮಂತ್ರಿ ಹುದ್ದೆಗೇರಲಿದ್ದಾರೆ.
ಇನ್ನೊಂದೆಡೆ ಬಿಹಾರದಲ್ಲಿ ರಾಜಕೀಯ ಬಿಕ್ಕಟ್ಟು ಹಿನ್ನಲೆಯಲ್ಲಿ ದೆಹಲಿಯಲ್ಲಿ ವಿದ್ಯಮಾನಗಳು ಗರಿಗೆದರಿವೆ. ಬಿಹಾರ ಬಿಜೆಪಿ ಅಧ್ಯಕ್ಷ ಸುಶೀಲ್ ಮೋದಿ ದೆಹಲಿಗೆ ದೌಡಾಯಿಸಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಜತೆ ರಾಜಕೀಯ ಬೆಳವಣಿಗೆ ಕುರಿತು ಚರ್ಚೆ ನಡೆಸಲಿದ್ದಾರೆ. ಈ ಭೇಟಿ ಸಾಕಷ್ಟು ಕುತೂಹಲ ಮೂಡಿಸಿದೆ.
ಒಟ್ಟಿನಲ್ಲಿ ಬಿಹಾರ ರಾಜಕೀಯ ಭವಿಷ್ಯದ ಚಂಡು ಸಧ್ಯ ರಾಜ್ಯಪಾಲರ ಅಂಗಳದಲ್ಲಿದ್ದು, ಮಾಂಝಿ ಶಿಫಾರಸು ಮಾಡಿರುವ ವಿಧಾನಸಭೆ ವಿಸರ್ಜನೆಯನ್ನು ಒಪ್ಪಿಕೊಳ್ಳಬಹುದು ಅಥವಾ ನೂತನ ಶಾಕಾಂಗ ಪಕ್ಷದ ನಾಯಕರಾಗಿ ನಿತೀಶ್ ಕುಮಾರ್ ಆಯ್ಕೆಯನ್ನು ಒಪ್ಪಿಕೊಳ್ಳಬಹುದು ಇಲ್ಲವೇ ಬಿಹಾರದಲ್ಲಿ ರಾಷ್ಟ್ರಪತಿ ಆಳ್ವಿಕೆಗೆ ಶಿಫಾರಸು ಮಾಡಬಹುದು. ಒಟ್ಟಿನಲ್ಲಿ ರಾಜ್ಯಪಾಲರ ಮುಂದೆ ಈ ಮೂರು ಆಯ್ಕೆಗಳಿವೆ.