ಪುಣೆ : 'ಮುಸ್ಲಿಂ ಮೀಸಲಾತಿ' ಬಗ್ಗೆ ಆಯೋಜಿಸಲಾಗಿದ್ದ ಕಾರ್ಯಕ್ರಮದಲ್ಲಿ ಭಾಗವಹಿಸದಂತೆ ಪುಣೆ ಪೊಲೀಸರು ಮಜ್ಲಿಸ್-ಎ-ಇತ್ತೆಹಾದುಲ್ ಮುಸ್ಲಿಮೀನ್(ಎಂಐಎಂ) ಸಂಘಟನೆ ಮುಖಂಡ ಅಸಾವುದ್ದೀನ್ ಒವೈಸಿಗೆ ನಿರ್ಬಂಧ ಹೇರಿದ್ದಾರೆ. ಪುಣೆ ಪೊಲೀಸರ ಈ ಕ್ರಮವನ್ನು ಶಿವಸೇನೆ ಸ್ವಾಗತಿಸಿದೆ.
ಅಸಾವುದ್ದೀನ್ ಒವೈಸಿ ಕೋಮು ಪ್ರಚೋದನಾಕಾರಿ ಹೇಳಿಕೆಗಳನ್ನು ನೀಡುವ ಹಿನ್ನೆಲೆಯಲ್ಲಿ ಮುಸ್ಲಿಂ ಮೀಸಲಾತಿ ಬಗ್ಗೆ ಆಯೋಜಿಸಲಾಗಿದ್ದ ಕಾರ್ಯಕ್ರಮದಲ್ಲಿ ಭಾಗವಹಿಸದಂತೆ ಪುಣೆ ಪೊಲೀಸರು ನಿರ್ಬಂಧ ವಿಧಿಸಿದ್ದಾರೆ.
ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಬಿಜೆಪಿಯ ಮೈತ್ರಿ ಪಕ್ಷ ಶಿವಸೇನೆ, ಪುಣೆ ಪೊಲೀಸರಿಗೆ ಅಭಿನಂದನೆ ಸಲ್ಲಿಸಿದೆ.ಕೋಮು ಸೌಹಾರ್ದತೆಗೆ ಒವೈಸಿ ಭಾಷಣ ಧಕ್ಕೆ ಉಂಟುಮಾಡುವ ಸಾಧ್ಯತೆ ಇರುವ ಹಿನ್ನೆಲೆಯಲ್ಲಿ ಅಸಾವುದ್ದೀನ್ ಒವೈಸಿ ಹಾಗೂ ಅವರ ಬೆಂಬಲಿಗರನ್ನು ಮಹಾರಾಷ್ಟ್ರಕ್ಕೆ ಆಗಮಿಸದಂತೆ ನಿಷೇಧ ವಿಧಿಸಬೇಕೆಂದು ಶಿವಸೇನೆ ಅಭಿಪ್ರಾಯಪಟ್ಟಿದೆ.
ಮುಸ್ಲಿಂ ಮೀಸಲಾತಿ ಬಗ್ಗೆಯೂ ಮಾತನಾಡಿರುವ ಶಿವಸೇನೆ, ಆರ್ಥಿಕ ಸ್ಥಿತಿಯನ್ನು ಗಮನದಲ್ಲಿಟ್ಟುಕೊಂಡು ಮುಸ್ಲಿಮರಿಗೆ ಮೀಸಲಾತಿ ನೀಡುವುದಕ್ಕೆ ಒಪ್ಪಿಗೆ ಇದೆ. ಆದರೆ ಧರ್ಮದ ಆಧಾರದಲ್ಲಿ ಮೀಸಲಾತಿ ನೀಡುವುದನ್ನು ವಿರೋಧಿಸುವುದಾಗಿ ತಿಳಿಸಿದೆ.