ಬೆಂಗಳೂರು : ವಿಶ್ವ ಹಿಂದೂ ಪರಿಷತ್ ನ ಅಂತರಾಷ್ಟ್ರೀಯ ಕಾರ್ಯಾಧ್ಯಕ್ಷ ಪ್ರವೀಣ್ ತೊಗಾಡಿಯಾ ಬೆಂಗಳೂರು ಪ್ರವೇಶಿಸದಂತೆ ನಿಷೇಧ ಹೇರಿರುವುದನ್ನು ಸದನದಲ್ಲಿ ಪ್ರಶ್ನಿಸುವುದಾಗಿ ಮಾಜಿ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ ಹೇಳಿದ್ದಾರೆ.
ವಿಧಾನಸೌಧದಲ್ಲಿ ಮಾತನಾಡಿದ ಜಗದೀಶ್ ಶೆಟ್ಟರ್, ಪ್ರವೀಣ್ ತೊಗಾಡಿಯಾ ಬೆಂಗಳೂರು ಪ್ರವೇಶಿಸದಂತೆ ನಿಷೇಧ ಹೇರಿರುವುದು ಪ್ರಜಾಪ್ರಭುತ್ವ ವಿರೋಧಿ ನೀತಿ ಎಂದು ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ಪ್ರತಿಯೊಬ್ಬರಿಗೂ ದೇಶದ ಯಾವುದೇ ಭಾಗಕ್ಕೆ ತೆರಳುವ ಸ್ವಾತಂತ್ರ್ಯವಿದೆ. ಆದರೆ ಪ್ರವೀಣ್ ತೊಗಾಡಿಯಾ ಅವರಿಗೆ ನಿಷೇಧ ಹೇರುವ ಮೂಲಕ ಸಿದ್ದರಾಮಯ್ಯ ಸರ್ಕಾರ ಪ್ರಜಾಪ್ರಭುತ್ವ ವಿರೋಧಿ ನೀತಿ ಅನುಸರಿಸುತ್ತಿದೆ ಎಂದು ಜಗದೀಶ್ ಶೆಟ್ಟರ್ ಕಿಡಿ ಕಾರಿದ್ದಾರೆ.
ಪ್ರವೀಣ್ ತೊಗಾಡಿಯಾ ಅವರು ರಾಜ್ಯದ ವಿವಿಧ ಭಾಗಗಳಲ್ಲಿ ನಡೆದ ಕಾರ್ಯಕ್ರಮಗಳಲ್ಲಿ ಭಾಗವಹಿಸಿದ್ದಾರೆ. ಆದರೆ ಆಗ ಯಾರೂ ನಿಷೇಧ ಹೇರಿರಲಿಲ್ಲ. ಬೆಂಗಳೂರಿನಲ್ಲಿ ನಡೆಯುತ್ತಿರುವ ವಿಶ್ವ ಹಿಂದೂ ಪರಿಷತ್ ಸಮಾಜೋತ್ಸವ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳದಂತೆ ನಿಷೇಧ ಹೇರಿರುವುದು ಏಕೆ ಎಂದು ಜಗದೀಶ್ ಶೆಟ್ಟರ್ ಪ್ರಶ್ನಿಸಿದ್ದಾರೆ.
ಸರ್ಕಾರಕ್ಕೆ, ಪ್ರವೀಣ್ ತೊಗಾಡಿಯಾ ರಾಜ್ಯಕ್ಕೆ ಬಂದರೆ ಕಾನೂನು ಸುವ್ಯವಸ್ಥೆ ಕಾಪಾಡುವ ಸಾಮರ್ಥ್ಯವಿಲ್ಲ ಆದ್ದರಿಂದಲೇ ಕಾನೂನು ಸುವ್ಯವಸ್ಥೆ ನೆಪವೊಡ್ಡಿ ನಿಷೇಧ ಹೇರಿದೆ ಎಂದು ಶೆಟ್ಟರ್ ಲೇವಡಿ ಮಾಡಿದ್ದಾರೆ.