ನವದೆಹಲಿ : ದೆಹಲಿ ವಿಧಾನಸಭಾ ಚುನಾವಣೆಗೆ ಕೆಲವೇ ದಿನಗಳು ಇರುವ ಬೆನ್ನಲ್ಲೇ 100 ಕಾರ್ಪೊರೇಟ್ ದಿಗ್ಗಜರು ಬಿಜೆಪಿಗೆ ಸೇರ್ಪಡೆಯಾಗಿದ್ದಾರೆ.
ಬ್ಯಾಂಕ್ ಅಧಿಕಾರಿಗಳು, ಉದ್ಯಮಿಗಳು ಸೇರಿದಂತೆ ಸುಮಾರು 100 ಮಂದಿ ಬಿಜೆಪಿ ಪಕ್ಷದ ಅಧ್ಯಕ್ಷ ಅಮಿತ್ ಶಾ ಮತ್ತು ಯುವ ಮೋರ್ಚಾ ಅಧ್ಯಕ್ಷ ಅನುರಾಗ್ ಠಾಕೂರ್ ಸಮ್ಮುಖದಲ್ಲಿ ಬಿಜೆಪಿಗೆ ಸೇರಿದ್ದಾರೆ.
ಉದ್ಯಮಿಗಳನ್ನು ತಮ್ಮ ಪಕ್ಷಕ್ಕೆ ಬರಮಾಡಿಕೊಂಡ ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಶಾ, ಬಿಜೆಪಿ ಕುಟುಂಬಕ್ಕೆ ಸ್ವಾಗತ ಎಂದರು. ಕೇಂದ್ರ ಸರ್ಕಾರದ ಹೊಸ ಯೋಜನೆಗಳೊಂದಿಗೆ ಕೈ ಜೋಡಿಸಿ ಜನರಿಗೆ ಉದ್ಯೋಗ ಕಲ್ಪಿಸುವ ಕಾರ್ಯವನ್ನು ಮಾಡಿ, ದೇಶದ ಪ್ರಗತಿಗೆ ಜತೆಯಾಗಲು ಕರೆ ನೀಡಿದ್ದಾರೆ.
ಲುಫ್ತಾನ್ಸಾದ ಪರ್ವೇಜ್ ಅಲಾಂಗಿರ್ ಖಾನ್, ಕತಾರ್ ಏರ್ವೇಸ್ನ ದೇಶೀಯ ಮುಖ್ಯಸ್ಥ ಹೆನ್ರಿ ಮೋಸೆಸ್, ಎಟಿಆಂಡ್ಟಿ ಯ ನೀತಾ ಅಗರ್ ವಾಲ್, ಅಯಿಕೋನ್ ಗ್ರೂಪ್ನ ಜಗ್ಪ್ರೀತ್ ಲಾಂಬಾ, ಕಪಿಲ್ ಕುಮಾರಿಯಾ (ಕಾರ್ಪರೇಟ್ ಅಲಿಯೆನ್ಸ್ ಗ್ರೂಪ್), ಅನಿಲ್ ಪರಾಶರ್ (ಇಂಟರ್ಗ್ಲೋಬ್ ಟೆಕ್ನಾಲಜೀಸ್, ಡಾ. ನವೀನ್ ತಲ್ವಾರ್ (ಹಿರಿಯ ಸರ್ಜನ್, ಪೋರ್ಟೀಸ್ ಹಾಸ್ಪಿಟಲ್), ರಾಜೀವ್ ತ್ಯಾಗಿ (ಹಿರಿಯ ನ್ಯಾಯವಾದಿ), ರಾಜೀವ್ ಬಾಂಬ್ರಿ ಮೊದಲಾದವರು ಬಿಜೆಪಿಗೆ ಸೇರಿದ ಗಣ್ಯರಾಗಿದ್ದಾರೆ.
ಬ್ಯಾಂಕ್ ಆಫ್ ಅಮೆರಿಕ, ಹನಿವೆಲ್, ಸ್ಪೈಸ್ಜೆಟ್, ಬಾಂಬಾರ್ಡಿಯರ್, ಯುಟಿಸಿ, ಕೆಪಿಎಂಜಿ ಸಂಸ್ಥೆಗಳ ಹಿರಿಯ ಅಧಿಕಾರಿಗಳು ಕೂಡಾ ಈ ಸಮಾರಂಭದಲ್ಲಿ ಪಾಲ್ಗೊಂಡಿದ್ದರು.