Untitled Document
Sign Up | Login    
Dynamic website and Portals
  
February 1, 2015

ಫೆ.2ರಿಂದ ರಾಜ್ಯ ವಿಧಾನಮಂಡಲ ಅಧಿವೇಶನ ಆರಂಭ

ಬೆಂಗಳೂರು : ವಿಧಾನಮಂಡಲದ ಉಭಯ ಸದನಗಳ 2015ನೇ ಸಾಲಿನ ಅಧಿವೇಶನಫೆ.2ರಿಂದ ಆರಂಭವಾಗಲಿದೆ.

ಒಟ್ಟು 10 ದಿನಗಳ ಕಾಲ ಅಂದರೆ ಫೆ. 13ರವರೆಗೆ ನಡೆಯುವ ಅಧಿವೇಶನದ ಮೊದಲ ದಿನ ರಾಜ್ಯಪಾಲ ವಜುಭಾಯಿ ವಾಲಾ ಅವರು ಜಂಟಿ ಅಧಿವೇಶನವನ್ನುದ್ದೇಶಿಸಿ ಭಾಷಣ ಮಾಡುವ ಮೂಲಕ ಅಧಿವೇಶನಕ್ಕೆ ಚಾಲನೆ ನೀಡಲಿದ್ದಾರೆ.

ವಿಧಾನಸಭಾ ಸ್ಪೀಕರ್ ಕಾಗೋಡು ತಿಮ್ಮಪ್ಪ ಮತ್ತು ವಿಧಾನ ಪರಿಷತ್‌ ಸಭಾಪತಿ ಡಿ.ಎಚ್‌.ಶಂಕರಮೂರ್ತಿ ಅವರು ಪ್ರತ್ಯೇಕ ಸುದ್ದಿಗೋಷ್ಠಿಯಲ್ಲಿ ಅಧಿವೇಶನದ ಕುರಿತು ವಿವರ ನೀಡಿದರು. ಸೋಮವಾರ ಮಧ್ಯಾಹ್ನ 12 ಗಂಟೆಗೆ ರಾಜ್ಯಪಾಲರು ಜಂಟಿ ಅಧಿವೇಶನ ಉದ್ದೇಶಿಸಿ ಮಾತನಾಡಲಿದ್ದಾರೆ. ಬಳಿಕ ವಿಧಾನಸಭೆ ಮತ್ತು ವಿಧಾನ ಪರಿಷತ್ತಿನ ಕಲಾಪಗಳು ಪ್ರತ್ಯೇಕವಾಗಿ ಆರಂಭವಾಗಿ ಮಂಗಳವಾರಕ್ಕೆ ಸದನ ಮುಂದೂಡಲಾಗುವುದು. ಮಂಗಳವಾರ ಸಂತಾಪ ಸೂಚನಾ ನಿರ್ಣಯ ಮಂಡನೆ ನಂತರ ಇತರೆ ಕಲಾಪಗಳು ಆರಂಭವಾಗಲಿದೆ ಎಂದು ಹೇಳಿದರು.

ವಿಧಾನಸಭೆ ಅಧಿವೇಶನದಲ್ಲಿ ಈ ಬಾರಿ ಕರ್ನಾಟಕ ಶಿಕ್ಷಣ (ತಿದ್ದುಪಡಿ) ವಿಧೇಯಕ ಮಂಡನೆಯಾಗಲಿದೆ. ಅದೇ ರೀತಿ ಕರ್ನಾಟಕ ಕಾಕಂಬಿ ನಿಯಂತ್ರಣ ವಿಧೇಯಕ, ಕರ್ನಾಟಕ ಸರೋವರ ಸಂರಕ್ಷಣೆ ಮತ್ತು ಅಭಿವೃದ್ಧಿ ವಿಧೇಯಕ ಹಾಗೂ ಕರ್ನಾಟಕ ಹಿಂದು ಧಾರ್ಮಿಕ ಸಂಸ್ಥೆಗಳು ಮತ್ತು ಧರ್ಮಾದಾಯ ದತ್ತಿಗಳ (ತಿದ್ದುಪಡಿ) ವಿಧೇಯಕಗಳ ಕುರಿತು ಚರ್ಚೆ ನಡೆಯಲಿದೆ ಎಂದು ಸ್ಪೀಕರ್‌ ಕಾಗೋಡು ತಿಮ್ಮಪ್ಪ ಹೇಳಿದರು.

ಒಟ್ಟು 9 ದಿನಗಳ ಕಾಲ ಪ್ರಶ್ನೋತ್ತರ ಕಲಾಪ ನಡೆಯಲಿದ್ದು, ಇದುವರೆಗೆ 2256 ಪ್ರಶ್ನೆಗಳು ಸ್ವೀಕೃತವಾಗಿ 2181 ಪ್ರಶ್ನೆಗಳನ್ನು ಅಂಗೀಕರಿಸಲಾಗಿದೆ. ಇವುಗಳಲ್ಲಿ 75 ಚುಕ್ಕೆ ಗುರುತಿನ ಪ್ರಶ್ನೆಗಳು ಮತ್ತು 2106 ಚುಕ್ಕೆ ಗುರುತಿಲ್ಲದ ಪ್ರಶ್ನೆಗಳು ಎಂದು ವಿಂಗಡಿಸಲಾಗಿದೆ. ಇದರ ಜತೆಗೆ 29 ಗಮನ ಸೆಳೆಯುವ ಸೂಚನೆಗಳು, ನಿಯಮ 351ರಡಿ 22 ಸೂಚನೆಗಳನ್ನು ಸ್ವೀಕರಿಸಲಾಗಿದೆ. ಶಾಸಕ ಕೆ. ಗೋಪಾಲಯ್ಯ ಅವರು "ರಾಜ್ಯದ ಪ್ರಾಥಮಿಕ ಶಾಲೆಗಳಲ್ಲಿ ಕನಿಷ್ಠ ಪಕ್ಷ 3 ವರ್ಷಕ್ಕೂ ಮೇಲ್ಪಟ್ಟು ಸೇವೆ ಸಲ್ಲಿಸುತ್ತಿರುವ ಶಿಕ್ಷಕರಿಗೂ ವಿಧಾನ ಪರಿಷತ್ತಿನ ಶಿಕ್ಷಕರ ಕ್ಷೇತ್ರದಿಂದ ನಡೆಯುವ ಚುನಾವಣೆಯಲ್ಲಿ ಮತ ಚಲಾಯಿಸುವ ಹಕ್ಕು ನೀಡಲು ಸಂವಿಧಾನದ ಅನುಚ್ಛೇದ 171(3)(ಸಿ)ಗೆ ಸೂಕ್ತ ತಿದ್ದುಪಡಿ ತರಬೇಕು ಎಂದು ಕೇಂದ್ರ ಸರ್ಕಾರವನ್ನು ಒತ್ತಾಯಿಸುವ' ಖಾಸಗಿ ನಿರ್ಣಯ ಮಂಡಿಸಲು ಅನುಮತಿ ಕೋರಿದ್ದಾರೆ ಎಂದು ವಿವರಿಸಿದರು.

ವಿಧಾನ ಪರಿಷತ್ತಿನಲ್ಲಿ ಪ್ರಶ್ನೋತ್ತರ ಕಲಾಪಕ್ಕೆ ಸಂಬಂಧಿಸಿದಂತೆ 738 ಪ್ರಶ್ನೆಗಳನ್ನು ಸ್ವೀಕರಿಸಿದ್ದು, ಈ ಪೈಕಿ 638 ಪ್ರಶ್ನೆಗಳನ್ನು ಚುಕ್ಕೆ ಗುರುತಿನ ಪ್ರಶ್ನೆಗಳಾಗಿ ಪರಿಗಣಿಸುವಂತೆ ಕೋರಿಕೆ ಬಂದಿದೆ. ಲಾಟರಿ ಮೂಲಕ ಚುಕ್ಕೆ ಗುರುತಿನ ಪ್ರಶ್ನೆಗಳನ್ನು ಆಯ್ಕೆ ಮಾಡಲಾಗುತ್ತದೆ ಎಂದು ವಿಧಾನ ಪರಿಷತ್‌ ಸಭಾಪತಿ ಡಿ.ಎಚ್‌.ಶಂಕರಮೂರ್ತಿ ತಿಳಿಸಿದರು.

ಇನ್ನುಳಿದಂತೆ ಅಲ್ಪಕಾಲಾವಧಿ ಚರ್ಚೆ, ಅರ್ಧಗಂಟೆ ಚರ್ಚೆ, ಗಮನ ಸೆಳೆಯುವ ಸೂಚನೆ, ನಿಯಮ 330ರಡಿ ಚರ್ಚೆ ಸೇರಿದಂತೆ ಇತರೆ ಕಲಾಪಗಳು ನಡೆಯಲಿವೆ. ಖಾಸಗಿ ಸದಸ್ಯರ ಕಾರ್ಯಕಲಾಪಕ್ಕೆ ಶುಕ್ರವಾರ ಸಮಯ ನಿಗದಿಪಡಿಸಲಾಗಿದೆ ಎಂದು ಹೇಳಿದರು.

 

 

Share this page : 
 

Readers' Comments (0)
Select Language : 
Press F12 to toggle Indian language and English
Your Name : 
Characters Remaining: 5000
 
 
The Ultimate Job Portal
Netzume - Resume Website Gou Products

Other News

Home | Opinion | Sports | Business | Education | Health | Life & Style| Entertainment | Science &Technology | Art & Culture | Terms of Use |
© bangalorewaves. All rights reserved. Developed And Managed by Rishi Systems P. Limited