Untitled Document
Sign Up | Login    
Dynamic website and Portals
  
January 30, 2015

ಕನ್ನಡದಲ್ಲೇ ಪ್ರಾಥಮಿಕ ಶಾಲಾ ಶಿಕ್ಷಣ, ಭಾಷಾ ನೀತಿಗೆ ತಿದ್ದುಪಡಿ: ಸಂಪುಟ ತೀರ್ಮಾನ

ಬೆಂಗಳೂರು : ರಾಜ್ಯದ ಎಲ್ಲಾ ಶಾಲೆಗಳಲ್ಲಿ ಒಂದರಿಂದ ಐದನೇ ತರಗತಿಯವರೆಗಿನ ಎಲ್ಲಾ ಮಕ್ಕಳು ಕನ್ನಡ ಭಾಷೆಯಲ್ಲಿಯೇ ಕಡ್ಡಾಯವಾಗಿ ಪ್ರಾಥಮಿಕ ಶಾಲಾ ಶಿಕ್ಷಣವನ್ನು ವ್ಯಾಸಂಗ ಮಾಡಲು ಕಾನೂನು ರೀತ್ಯಾ ಪೂರಕ ವಾತಾವರಣ ರಾಜ್ಯ ಸರ್ಕಾರ ಕಲ್ಪಿಸಲು ಮುಂದಾಗಿದೆ.

ಮಾತೃ ಭಾಷೆಯಲ್ಲಿ ಶಿಕ್ಷಣ ಒದಗಿಸಬೇಕೆಂಬ ಸರ್ಕಾರದ ಈ ಸದಾಶಯವನ್ನು ಸಾಕಾರಗೊಳಿಸಲು ಪ್ರಾಥಮಿಕ ಶಾಲೆಯಲ್ಲಿ ಉಚಿತ ಹಾಗೂ ಕಡ್ಡಾಯ ಪ್ರಾಥಮಿಕ ಶಾಲಾ ಶಿಕ್ಷಣ ಕಾಯಿದೆ – 2012 ರ ಪರಿಚ್ಛೇಧ 19(7)ಕ್ಕೆ ಭಾರತ ಸಂವಿಧಾನದ ಪರಿಚ್ಛೇಧ 29 (2) (ಎಫ್) ಮೂಲಕ ಭಾಷಾ ನೀತಿಗೆ ತಿದ್ದುಪಡಿ ತರಲು ರಾಜ್ಯ ಸಚಿವ ಸಂಪುಟ ತೀರ್ಮಾನಿಸಿದೆ.

ರಾಜ್ಯ ಸಚಿವ ಸಂಪುಟ ಸಭೆಯ ನಂತರ ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡಿದ ಸಚಿವ ಟಿ. ಬಿ.ಜಯಚಂದ್ರ ಈ ವಿಷಯವನ್ನು ಬಹಿರಂಗಪಡಿಸಿದರು.

ಸಂವಿಧಾನ ತಿದ್ದುಪಡಿ ಅಗತ್ಯ ಎಂದು ಮುಖ್ಯಮಂತ್ರಿಯವರು ಈಗಾಗಲೇ ಪ್ರಧಾನ ಮಂತ್ರಿಯವರ ಜೊತೆ ಮಾತನಾಡಿದ್ದಾರೆ. ಅಲ್ಲದೆ, ಇತರೆ ರಾಜ್ಯಗಳ ಮುಖ್ಯಮಂತ್ರಿಗಳಿಗೂ ಪತ್ರ ಬರೆದಿದ್ದಾರೆ.ಭಾಷಾ ನೀತಿಗೆ ಸಂಬಂಧಿಸಿದಂತೆ ಫೆಬ್ರವರಿ 2 ರಿಂದ ಪ್ರಾರಂಭವಾಗುವ ಜಂಟಿ ಅಧಿವೇಶನದಲ್ಲಿಯೇ ತಿದ್ದುಪಡಿ ವಿಧೇಯಕವನ್ನು ಮಂಡಿಸಲು ಸರ್ಕಾರ ಸಜ್ಜಾಗಿದೆ. ಅಲ್ಲದೆ, ಭಾಷಾ ನೀತಿಗೆ ಸಂಬಂಧಿಸಿದಂತೆ ಭಾರತ ಸರ್ವೋಚ್ಛ ನ್ಯಾಯಾಲಯದಲ್ಲಿ ರಾಜ್ಯವು ಸಲ್ಲಿಸಿದ್ದ ಪುನರ್ಪರಿಶಿಲನಾ ಅರ್ಜಿಯನ್ನು ನ್ಯಾಯಾಲಯವು ತಳ್ಳಿ ಹಾಕಿದ್ದರೂ, ರಾಜ್ಯದ ಕ್ಯುರೇಟಿವ್ ಅರ್ಜಿಯ ವಿಚಾರಣೆ ಬಾಕಿ ಇದೆ. ಭಾಷಾ ನೀತಿಗೆ ಸಂಬಂಧಿಸಿದಂತೆ ರಾಜ್ಯ ಸರ್ಕಾರ ತನ್ನ ನಿಲುವಿಗೆ ಬದ್ಧವಾಗಿದೆ ಎಂದು ವಿವರಿಸಿದರು.

ಕರ್ನಾಟಕ ಭವನದಲ್ಲಿ ಗುತ್ತಿಗೆ ಆಧಾರದ ಮೇರೆಗೆ ಸೇವೆ ಸಲ್ಲಿಸುತ್ತಿರುವ 120 ಕ್ಕೂ ಹೆಚ್ಚು ಸಿಬ್ಬಂದಿಯನ್ನು ಖಾಯಂಗೊಳಿಸಲು ಅಗತ್ಯ ನಿಯಮಾವಳಿಗಳನ್ನು ರೂಪಿಸಿ ಆಕ್ಷೇಪಗಳನ್ನು ಆಹ್ವಾನಿಸಲು ರಾಜ್ಯ ಸಚಿವ ಸಂಪುಟ ಅನುಮತಿ ನೀಡಿದೆ. ರಾಷ್ಟ್ರದ ರಾಜಧಾನಿಯಲ್ಲಿ ಸೇವೆ ಸಲ್ಲಿಸಲು ಉತ್ಸುಕರಾಗಿರುವ ಕನ್ನಡಿಗರ ಸಂಖ್ಯೆ ಅತಿ ವಿರಳ. ಪ್ರಸ್ತುತದಲ್ಲಿ ಅಗತ್ಯ ಸೇವೆಯನ್ನು ಹೊರಗುತ್ತಿಗೆಯ ಆಧಾರದಲ್ಲಿಯೇ ಪಡೆಯಲಾಗುತ್ತಿದೆ. ಈ ಹಿನ್ನೆಲೆಯಲ್ಲಿ ಸಚಿವ ಸಂಪುಟ ಈ ತೀರ್ಮಾನ ಕೈಗೊಂಡಿದೆ ಎಂದು ಸ್ಪಷ್ಟಪಡಿಸಿದರು.

ಕರ್ನಾಟಕ ಭವನದ ಜಂಟಿ ನಿವಾಸಿ ಆಯುಕ್ತ ಟಿ.ಎಂ.ರಂಗಸ್ವಾಮಿ ಅವರನ್ನು ನಿವೃತ್ತಿಯ ನಂತರವೂ ಅದೇ ಹುದ್ದೆಯಲ್ಲಿಯೇ ಮುಂದಿನ ಒಂದು ವರ್ಷ ಅವಧಿಗೆ ಗುತ್ತಿಗೆ ಆಧಾರದ ಮೇರೆಗೆ ಮುಂದುವರೆಸಲು ಸಂಪುಟ ಒಪ್ಪಿಗೆ ನೀಡಿದೆ ಎಂದೂ ಅವರು ಹೇಳಿದರು.

ಮೈಸೂರಿನ ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿರುವ ದೇವರಾಜ ಮಾರುಕಟ್ಟೆಯ ಕಟ್ಟಡವನ್ನು ಒಂಭತ್ತು ಕೋಟಿ ರೂ ವೆಚ್ಚದಲ್ಲಿ ಪಾರಂಪರಿಕ ಶೈಲಿಯಲ್ಲಿ ಅಭಿವೃದ್ಧಿಪಡಿಸಲು ರಾಜ್ಯ ಸಚಿವ ಸಂಪುಟ ಆಡಳಿತಾತ್ಮಕ ಅನುಮೋದನೆ ನೀಡಿದೆ. ಅಂತೆಯೇ, ವಿಜಯಪುರ ಕನಕದಾಸ ನೌಕರರ ಸಂಘಕ್ಕೆ ಮಾರ್ಗಸೂಚಿ ದರದ ಶೇಕಡಾ 50 ರಷ್ಟು ಮೊತ್ತದಲ್ಲಿ 1504.20 ಚದುರ ಮೀಟರ್ ನಿವೇಶನವನ್ನು ಹಂಚಿಕೆ ಮಾಡಲು ಸಂಪುಟ ಸಮ್ಮತಿಸಿದೆ.

ಚಾಮರಾಜನಗರ ಜಿಲ್ಲೆಯ ಯಳಂದೂರು ತಾಲ್ಲೂಕಿನ ಬಿಳಿಗಿರಿ ರಂಗನ ಬೆಟ್ಟದಲ್ಲಿ 10.75 ಕೋಟಿ ರೂ. ವೆಚ್ಚದಲ್ಲಿ, ಕೋಲಾರ ಜಿಲ್ಲೆಯ ಬಂಗಾರಪೇಟೆ ತಾಲ್ಲೂಕಿನ ಎಳೆಸಂದ್ರ ಗ್ರಾಮದಲ್ಲಿ 10.05 ಕೋಟಿ ರೂ. ವೆಚ್ಚದಲ್ಲಿ ಹಾಗೂ ಬೆಳಗಾವಿ ಜಿಲ್ಲೆಯ ರಾಯಬಾಗ್ ತಾಲ್ಲೂಕಿನ ಸುಟ್ಟಟ್ಟಿ (ಕುಡಚಿ) ಗ್ರಾಮದಲ್ಲಿ 11.45 ಕೋಟಿ ರೂ ವೆಚ್ಚದಲ್ಲಿ ಪರಿಶಿಷ್ಟ ಜಾತಿಯ ಮೊರಾರ್ಜಿ ದೇಸಾಯಿ ವಸತಿ ಶಾಲಾ ಸಂಕೀರ್ಣವನ್ನು ನಿರ್ಮಿಸಲು ಸಚಿವ ಸಂಪುಟ ಆಡಳಿತಾತ್ಮಕ ಅನುಮೋದನೆ ನೀಡಿದೆ.

ಅಂತೆಯೇ, ಚಿಕ್ಕಬಳ್ಳಾಪುರ ಜಿಲ್ಲೆಯ ಬಾಗೇಪಲ್ಲಿ ತಾಲ್ಲೂಕಿನ ಚೇಳೂರು ಹೋಬಳಿಯ ವೆಂಕಟಾಪುರ ಗ್ರಾಮದಲ್ಲಿ 8.30 ಕೋಟಿ ರೂ. ವೆಚ್ಚದಲ್ಲಿ, ತುಮಕೂರು ಜಿಲ್ಲೆಯ ಮಧುಗಿರಿ ತಾಲ್ಲೂಕಿನ ನಲ್ಲೇಕಾಮನಹಳ್ಳಿ ( ಬೆಡತ್ತೂರು ) ಗ್ರಾಮದಲ್ಲಿ 9.22 ಕೋಟಿ ರೂ ವೆಚ್ಚದಲ್ಲಿ, ಮಂಡ್ಯ ಜಿಲ್ಲೆಯ ಮಳವಳ್ಳಿ ತಾಲ್ಲೂಕಿನ ವಡ್ಡರಹಳ್ಳಿ ಗ್ರಾಮದಲ್ಲಿ 11.35 ಕೋಟಿ ರೂ. ವೆಚ್ಚದಲ್ಲಿ ಹಾಗೂ ಕೆ. ಆರ್. ಪೇಟೆ ತಾಲ್ಲೂಕಿನ ಮೊಳ್ಳೇನಹಳ್ಳಿ ಗ್ರಾಮದಲ್ಲಿ 10.75 ಕೋಟಿ ರೂ. ವೆಚ್ಚದಲ್ಲಿ ಕಿತ್ತೂರು ರಾಣಿ ಚೆನ್ನಮ್ಮ ವಸತಿ ಶಾಲಾ ಸಂಕೀರ್ಣವನ್ನು ನಿರ್ಮಿಸಲು ಸಂಪುಟ ಆಡಳಿತಾತ್ಮಕ ಅನುಮೋದನೆ ನೀಡಿದೆ.

ರಾಜ್ಯದಲ್ಲಿ ಕುಡಿಯುವ ನೀರಿನ ಯೋಜನೆಗಳ ವಿದ್ಯುದೀಕರಣ ಮೂಲಸೌಕರ್ಯ ಕಲ್ಪಿಸುವ ಸಲುವಾಗಿ ಪ್ರಸ್ತುತ ಇರುವ ವಿನಾಯಿತಿಯ ಮಿತಿಯನ್ನು ಒಂದು ಲಕ್ಷ ರೂ. ನಿಂದ ಐದು ಲಕ್ಷ ರೂ. ಗಳಿಗೆ ಹೆಚ್ಚಿಸಲು ಕರ್ನಾಟಕ ಸಾರ್ವಜನಿಕ ಸಂಗ್ರಹಣೆಯಲ್ಲಿ ಪಾರದರ್ಶಕತಾ ಕಾಯಿದೆ, 1996 ರ ಪರಿಚ್ಛೇಧ 4(ಇಇ) ಗೆ ತಿದ್ದುಪಡಿ ತರಲು ರಾಜ್ಯ ಸಚಿವ ಸಂಪುಟ ಅನುಮೋದನೆ ನೀಡಿದೆ ಎಂದು ಅವರು ವಿವರಿಸಿದರು.

 

 

Share this page : 
 

Readers' Comments (0)
Select Language : 
Press F12 to toggle Indian language and English
Your Name : 
Characters Remaining: 5000
 
 
The Ultimate Job Portal
Netzume - Resume Website Gou Products

Other News

Home | Opinion | Sports | Business | Education | Health | Life & Style| Entertainment | Science &Technology | Art & Culture | Terms of Use |
© bangalorewaves. All rights reserved. Developed And Managed by Rishi Systems P. Limited