ನವದೆಹಲಿ : ಫೆ.7ರಂದು 70 ಕ್ಷೇತ್ರಗಳಿಗೆ ನಡೆಯುತ್ತಿರುವ ದೆಹಲಿ ವಿಧಾನಸಭೆ ಚುನಾವಣೆಯಲ್ಲಿ ಕನಿಷ್ಠ 60 ಸ್ಥಾನಗಳನ್ನಾದರೂ ಗೆಲ್ಲಬೇಕು ಎಂದು ಬಿಜೆಪಿ ಅಧ್ಯಕ್ಷ ಅಮಿತ್ ಶಾ ಅವರು ಪಕ್ಷದ ದೆಹಲಿ ಘಟಕಕ್ಕೆ ಸೂಚನೆ ಕೊಟ್ಟಿದ್ದಾರೆ. ಆದರೆ ದೆಹಲಿ ಬಿಜೆಪಿ ಘಟಕ ನಡೆಸಿರುವ ಆಂತರಿಕ ಸಮೀಕ್ಷೆಯಲ್ಲಿ ಬಿಜೆಪಿ 40 ಸ್ಥಾನಗಳನ್ನು ಗೆಲ್ಲಬಹುದು ಎಂಬ ಮಾಹಿತಿ ದೊರಕಿದೆ.
ಇದರಿಂದ ಅಮಿತ್ ಶಾ ಅಸಮಾಧಾನಗೊಂಡಿದ್ದು, ಪಕ್ಷದ ವಾಸ್ತವ ಸ್ಥಿತಿಯನ್ನು ವೈಜ್ಞಾನಿಕವಾಗಿ ಅರಿತು, ಬೂತ್ ಮಟ್ಟದಲ್ಲಿ ಪಕ್ಷವನ್ನು ಬಲಗೊಳಿಸುವಂತೆ ಮುಖಂಡರಿಗೆ ತಾಕೀತು ಮಾಡಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಆಂತರಿಕ ಸಮೀಕ್ಷೆಯ ಪ್ರಕಾರ, 10ರಿಂದ 12 ಕ್ಷೇತ್ರಗಳಲ್ಲಿ ಬಿಜೆಪಿಗೆ ಗೆಲ್ಲುವ ಯಾವುದೇ ಅವಕಾಶ ಇಲ್ಲ. ಇನ್ನೂ 10ರಿಂದ 15 ಕ್ಷೇತ್ರಗಳಲ್ಲಿ ಗೆಲ್ಲುವ ಅವಕಾಶವಿದೆ. ಉಳಿದಂತೆ 2013ರಲ್ಲಿ ಗೆದ್ದಿದ್ದ 32 ಕ್ಷೇತ್ರಗಳನ್ನು ಬಿಜೆಪಿ ಈ ಬಾರಿ ಉಳಿಸಿಕೊಳ್ಳುವುದಲ್ಲದೆ, ಇನ್ನೂ ಎಂಟು ಕ್ಷೇತ್ರಗಳನ್ನು ಹೆಚ್ಚುವರಿಯಾಗಿ ಗಳಿಸಿಕೊಳ್ಳಲಿದೆ ಎಂದು ಹೇಳಲಾಗಿದೆ.