ಬೆಂಗಳೂರು : ರಾಜ್ಯ ಸರ್ಕಾರದ ವಿರುದ್ಧ ಟೀಕಾಪ್ರಹಾರ ನಡೆಸಿದ್ದ ವಿಪಕ್ಷ ನಾಯಕ ಜಗದೀಶ್ ಶೆಟ್ಟರ್ ಗೆ ತಿರುಗೇಟು ನೀಡಿರುವ ಸಿ.ಎಂ ಸಿದ್ದರಾಮಯ್ಯ, ಸರ್ಕಾರದ ಬಗ್ಗೆ ಮಾತನಾಡುವ ಶೆಟ್ಟರ್ ಮೊದಲು ಅವರೊಂದಿಗಿರುವ ಅತ್ಯಾಚಾರಿಗಳನ್ನು ನೋಡಿಕೊಳ್ಳಲಿ ಎಂದು ಹೇಳಿದ್ದಾರೆ.
ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಮುಖ್ಯಮಂತ್ರಿ ಸಿದ್ದರಾಮಯ್ಯ, ಬಿಜೆಪಿ ಪಕ್ಷದಲ್ಲೇ ಅತ್ಯಾಚಾರಿಗಳಿದ್ದಾರೆ. ಮೊದಲು ಅವರ ಬಗ್ಗೆ ಶೆಟ್ಟರ್ ಗಮನ ಹರಿಸಲಿ ಎಂದು ಸಲಹೆ ನೀಡಿದ್ದಾರೆ. ರಾಜ್ಯದಲ್ಲಿ ಅತ್ಯಾಚಾರ ಪ್ರಕರಣಗಳು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಸರ್ಕಾರದ ವಿರುದ್ಧ ಟೀಕಾಪ್ರಹಾರ ನಡೆಸಿದ್ದ ಜಗದೀಶ್ ಶೆಟ್ಟರ್, ಇದು ಅತ್ಯಾಚಾರಿ ಸರ್ಕಾರ ಎಂದು ವಾಗ್ದಾಳಿ ನಡೆಸಿದ್ದರು.
ಇದೇ ವೇಳೆ ಕೆ.ಪಿ.ಎಸ್.ಸಿ ಅಧ್ಯಕ್ಷ ಹುದ್ದೆಗೆ ವಿ.ಆರ್ ಸುದರ್ಶನ್ ಅವರ ಹೆಸರು ಶಿಫಾರಸ್ಸು ಮಾಡಿರುವುದನ್ನು ಸಮರ್ಥಿಸಿಕೊಂಡಿರುವ ಸಿಎಂ ಸಿದ್ದರಾಮಯ್ಯ, ಸುದರ್ಶನ್ ಯಾವುದೇ ತಪ್ಪು ಮಾಡಿಲ್ಲ ಎಂದು ಹೇಳಿದ್ದಾರೆ.
ಕೆ.ಪಿ.ಎಸ್.ಸಿ ಅಧ್ಯಕ್ಷ ಹುದ್ದೆಗೆ ರಾಜಕಾರಣಿಗಳನ್ನು ನೇಮಕ ಮಾಡುತ್ತಿದ್ದಾರೆ ಎಂದು ಬಿಜೆಪಿ ಆರೋಪಿಸಿತ್ತು. ಅಲ್ಲದೇ ವಿ.ಆರ್ ಸುದರ್ಶನ್ ವಿರುದ್ಧ ಭೂ ಹಗರಣದ ಆರೋಪವಿದ್ದು ಕಳಂಕಿತರನ್ನು ಕೆ.ಪಿ.ಎಸ್.ಸಿ ಅಧ್ಯಕ್ಷ ಹುದ್ದೆಗೆ ನೇಮಕ ಮಾಡಲಾಗುತ್ತಿದೆ ಎಂದು ರಾಜ್ಯಪಾಲರಿಗೆ ಬಿಜೆಪಿ ನಿಯೋಗ ದೂರು ನೀಡಿತ್ತು.