ಬೆಂಗಳೂರು : ಕೆ.ಪಿ.ಎಸ್.ಸಿ ಅಧ್ಯಕ್ಷರನ್ನಾಗಿ ವಿ.ಆರ್.ಸುದರ್ಶನ್ ಅವರನ್ನು ನೇಮಕ ಮಾಡಲು ರಾಜ್ಯ ಸರಕಾರ ನಡೆಸಿದ ಸತತ ಪ್ರಯತ್ನ ವಿಫಲವಾಗಿದ್ದು, ರಾಜ್ಯಪಾಲ ವಜೂಭಾಯಿ ವಾಲಾ ಅವರು ಕೆಪಿಎಸ್ಸಿ ಅಧ್ಯಕ್ಷ ಹಾಗೂ ಸದಸ್ಯರ ನೇಮಕಾತಿಗೆ ಸರ್ಕಾರ ಮಾಡಿದ್ದ ಶಿಫಾರಸನ್ನು ಎರಡನೇ ಬಾರಿಯೂ ತಿರಸ್ಕರಿಸಿದ್ದಾರೆ.
ಭೂ ಒತ್ತುವರಿ ಆರೋಪಕ್ಕೆ ಸಂಬಂಧಿಸಿದಂತೆ ವಿ.ಆರ್.ಸುದರ್ಶನ್ಗೆ ಲೋಕಾಯುಕ್ತರು ನೀಡಿದ್ದ ಕ್ಲೀನ್ ಚಿಟ್ ಆಧರಿಸಿ ರಾಜ್ಯ ಸರಕಾರ ಸ್ಪಷ್ಟನೆ ನೀಡಿತ್ತಾದರೂ ರಾಜ್ಯಪಾಲರು ಅದನ್ನು ಪರಿಗಣಿಸಿಲ್ಲ
ಜತೆಗೆ, ರೋಗಿಯೊಬ್ಬರಿಂದ ಲಂಚ ಪಡೆಯುವಾಗ ಲೋಕಾಯುಕ್ತ ಬಲೆಗೆ ಬಿದ್ದ ಆರೋಪ ಎದುರಿಸುತ್ತಿರುವ ಡಾ|ರವಿಕುಮಾರ್, ಭೂಗತ ಜಗತ್ತಿನ ಸಂಪರ್ಕ ಹೊಂದಿ ದ್ದವರಿಗೆ ರಿವಾಲ್ವರ್ ಲೈಸನ್ಸ್ ನೀಡಿದ ಆರೋಪ ಇದ್ದ ಉಲ್ಫಾತ್ ಹುಸೇನ್ ಹಾಗೂ ಮೃತ್ಯುಂಜಯ ಅವರ ಹೆಸರು ಸಹ ತಿರಸ್ಕೃತಗೊಂಡಿದೆ ಎಂದು ತಿಳಿದುಬಂದಿದೆ.
ಇದರೊಂದಿಗೆ ಕೆ.ಪಿ.ಎಸ್.ಸಿಗೆ 8 ಸದಸ್ಯರ ನೇಮಕಕ್ಕೆ ರಾಜ್ಯ ಸರಕಾರ ಮಾಡಿದ್ದ ಶಿಫಾರಸಿನ ಪೈಕಿ ಗೋವಿಂದಯ್ಯ, ನಾಗಾಬಾಯಿ ಬುಳ್ಳ, ರಘುನಂದನ್ ರಾಮಣ್ಣ , ಮೈಕೆಲ್ ಸೈಮನ್ ಬರೆಟ್ಟೋ ಅವರನ್ನು ಮಾತ್ರ ರಾಜ್ಯಪಾಲರು ಪರಿಗಣಿಸಿದಂತಾಗಿದೆ.
ವಿ.ಆರ್.ಸುದರ್ಶನ್ ಸೇರಿದಂತೆ ನಾಲ್ವರ ಹೆಸರನ್ನು ಎರಡನೇ ಬಾರಿಗೆ ತಿರಸ್ಕರಿಸಿರುವುದರಿಂದ ರಾಜ್ಯ ಸರಕಾರದ ಮುಂದಿನ ನಡೆ ಏನು ಎಂಬುದು ಕುತೂಹಲ ಮೂಡಿಸಿದೆ. ಕೆ.ಪಿ.ಎಸ್.ಸಿ ಸದಸ್ಯರ ನೇಮಕಾತಿ ವಿಚಾರ ಒಂದು ರೀತಿಯಲ್ಲಿ ರಾಜಭವನ ಮತ್ತು ಸರಕಾರದ ನಡುವೆ ಸಂಘರ್ಷ ಎಂದೇ ಬಿಂಬಿತವಾಗಿತ್ತು.
2014ರ ಡಿಸೆಂಬರ್ 24ರಂದು ಸರಕಾರವು ವಿ.ಆರ್.ಸುದರ್ಶನ್ ಸೇರಿದಂತೆ 8 ಜನರ ಹೆಸರನ್ನು ಕೆ.ಪಿ.ಎಸ್.ಸಿ ಸದಸ್ಯ ಸ್ಥಾನಕ್ಕೆ ನೇಮಕ ಮಾಡಲು ರಾಜ್ಯಪಾಲರಿಗೆ ಶಿಫಾರಸು ಮಾಡಿತ್ತು.
ರಾಜ್ಯ ಸರಕಾರ ಶಿಫಾರಸು ಮಾಡಿದ ಬೆನ್ನಲ್ಲೇ ವಿ.ಆರ್.ಸುದರ್ಶನ್, ರಘುನಂದನ್ ರಾಮಣ್ಣ ಸೇರಿ ನಾಲ್ವರು ರಾಜಕೀಯ ಪಕ್ಷಗಳ ನಂಟು ಹೊಂದಿದ್ದಾರೆ ಇತರ ನಾಲ್ವರ ಮೇಲೆ ಬೇರೆ ಬೇರೆ ಆರೋಪಗಳಿವೆ ಎಂಬ ಕೂಗು ಕೇಳಿಬಂದಿತು. ರಾಜ್ಯ ಸರ್ಕಾರದ ಶಿಫಾರಸು ಒಪ್ಪಿಕೊಳ್ಳಬಾರದು ಎಂದು ಪ್ರತಿಪಕ್ಷ ಬಿಜೆಪಿ ನಿಯೋಗ ರಾಜ್ಯಪಾಲರನ್ನು ಭೇಟಿ ಮಾಡಿ ಮನವಿ ಸಲ್ಲಿಸಿತು. ಜೆಡಿಎಸ್ ಸಹ ಧ್ವನಿಗೂಡಿಸಿತು. ಇದರೊಂದಿಗೆ ಕೆಪಿಎಸ್ಸಿ ಸದಸ್ಯರ ನೇಮಕಾತಿ ವಿವಾದದ ಸ್ವರೂಪ ಪಡೆದಿತ್ತು.
ಈ ನಡುವೆ, ಕೆಪಿಎಸ್ಸಿ ಅಧ್ಯಕ್ಷ ಪಟ್ಟದಲ್ಲಿ ಕುಳ್ಳಿರಿಸಲು ಶಿಫಾರಸು ಮಾಡಲಾಗಿದ್ದ ವಿ.ಆರ್.ಸುದರ್ಶನ್ ವಿರುದ್ಧ ಭೂ ಒತ್ತುವರಿ, ಸುಳ್ಳು ಪ್ರಮಾಣ ಪತ್ರ ನೀಡಿ ಬಿಡಿಎಯಿಂದ ನಿವೇಶನ ಪಡೆದ ಆರೋಪಗಳೂ ಕೇಳಿಬಂದವು. ಅದಕ್ಕೆ ಸಂಬಂಧಿಸಿದ ದಾಖಲೆಗಳನ್ನೂ ಬಿಜೆಪಿ ಬಿಡುಗಡೆ ಮಾಡಿತು.
ಗೋವಿಂದಯ್ಯ ವಿರುದ್ಧ ಸುಳ್ಳುಜಾತಿ ಪ್ರಮಾಣ ಪತ್ರ ನೀಡಿ ಉದ್ಯೋಗ ಗಿಟ್ಟಿಸಿದ ಆರೋಪ, ಉಲ್ಫಾತ್ ಹುಸೇನ್ ವಿರುದ್ಧ ಭೂಗತ ಸಂಪರ್ಕವಿದ್ದವರಿಗೆ ರಿವಾಲ್ವರ್ ಲೈಸೆನ್ಸ್ ನೀಡಿದ ಆರೋಪ, ರವಿಕುಮಾರ್ ವಿರುದ್ಧ ಲಂಚ ಪಡೆಯುವಾಗ ಲೋಕಾಯುಕ್ತ ದಾಳಿಗೆ ಬಿದ್ದ ಆರೋಪಗಳನ್ನೂ ಮಾಡಲಾಗಿತ್ತು. ರಾಜ್ಯವ್ಯಾಪಿ ಈ ಬಗ್ಗೆ ಪರ-ವಿರುದ್ಧ ವಾದಗಳು ಕೇಳಿ ಬಂದಿದ್ದವು.