ನವದೆಹಲಿ : 'ಪಿಕೆ' ಚಿತ್ರಕ್ಕೆ ಹೆಸರಾಂತ ಲೇಖಕಿ ತಸ್ಲೀಮಾ ನಸ್ರೀನ್ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಟ್ವಿಟರ್ ನಲ್ಲಿ ಅಭಿಪ್ರಾಯ ವ್ಯಕ್ತಪಡಿಸಿರುವ ತಸ್ಲೀಮಾ ನಸ್ರೀನ್, ಪಿಕೆ ಚಿತ್ರವನ್ನು ಪಾಕಿಸ್ತಾನದಲ್ಲೋ ಅಥವಾ ಬಾಂಗ್ಲಾದೇಶದಲ್ಲೋ ಮಾಡಿದ್ದರೆ, ಚಿತ್ರದ ನಿರ್ಮಾಪಕ, ನಿರ್ದೇಶಕ, ನಟ ಅಮೀರ್ ಖಾನ್ ಎಲ್ಲರನ್ನೂ ಕೊಲ್ಲಲಾಗುತ್ತಿತ್ತು ಇಲ್ಲವೇ ಜೈಲಿಗೆ ಅಟ್ಟಲಾಗುತ್ತಿತ್ತು ಎಂದು ಹೇಳಿದ್ದಾರೆ.
ನಾವು ಎಂತಹ ಪುಸ್ತಕಗಳನ್ನು ಓದಬೇಕೆಂಬುದನ್ನು ಓರ್ವ ಮುಲ್ಲಾ ನಿರ್ಧರಿಸುವಂತಹ, ನಾವು ಯಾವ ಸಿನಿಮಾ ನೋಡಬೇಕೆಂಬುದನ್ನು ಓರ್ವ ಬಾಬ ನಿರ್ಧರಿಸುವಂತಹ ಸಮಾಜವನ್ನು ನಿರ್ಮಾಣ ಮಾಡಿದ್ದೇವೆ ಎಂದು ಬೇಸರ ವ್ಯಕ್ತಪಡಿಸಿರುವ ತಸ್ಲೀಮಾ ನಸ್ರೀನ್ ಇದರ ಸಂಪೂರ್ಣ ಕೀರ್ತಿ ಕಳೆದ 60 ವರ್ಷಗಳ ಸೆಕ್ಯುಲರ್ ಆಡಳಿತಕ್ಕೆ ಸಲ್ಲುತ್ತದೆ ಎಂದು ಹೇಳಿದ್ದಾರೆ.
ಪಿಕೆ ಹಿಂದೂ ವಿರೋಧಿ ಚಿತ್ರವಲ್ಲ ಎಂದು ಅಭಿಪ್ರಾಯಪಟ್ಟಿರುವ ತಸ್ಲೀಮಾ ನಸ್ರೀನ್, ಪಿಕೆ ತರ್ಕಬದ್ಧ ಚಿಂತನೆಗಳನ್ನು ಉತ್ತೇಜಿಸುತ್ತದೆ ಎಂದು ಹೇಳಿದ್ದಾರೆ.
ಹಿಂದೂ ಸಂಘಟನೆಗಳು ಪಿಕೆ ಚಿತ್ರದ ವಿರುದ್ಧ ಪ್ರತಿಭಟನೆ ಮಾಡುತ್ತಿರುವುದರ ಬಗ್ಗೆ ಪ್ರತಿಕ್ರಿಯಿಸಿರುವ ತಸ್ಲೀಮಾ ನಸ್ರೀನ್, ನೀವು ಹೆಚ್ಚು ವಿರೋಧಿಸಿದಷ್ಟೂ ಜನರಲ್ಲಿ ಕುತೂಹಲ ಹೆಚ್ಚಾಗುತ್ತದೆ. ಆದ್ದರಿಂದ ವಿರೋಧ ವ್ಯಕ್ತಪಡಿಸಿದಷ್ಟೂ ಹೆಚ್ಚು ಜನ ಪಿಕೆ ಚಿತ್ರವನ್ನು ನೋಡಲಿದ್ದಾರೆ ಎಂದು ಹೇಳಿದ್ದಾರೆ.