ನವದೆಹಲಿ : 'ರಕ್ಷಣಾ' ಹಾಗೂ ಸೈಬರ್ ಭದ್ರತೆ ವಿಷಯಕ್ಕೆ ಸಂಬಂಧಿಸಿದಂತೆ ದ್ವಿಪಕ್ಷೀಯ ಸಂಬಂಧಗಳನ್ನು ಬಲಗೊಳಿಸಲು ಭಾರತ ಹಾಗೂ ದಕ್ಷಿಣ ಕೊರಿಯಾ ತೀರ್ಮಾನಿಸಿವೆ.
ಎರಡು ದಿನಗಳ ದಕ್ಷಿಣ ಕೊರಿಯಾ ಪ್ರವಾಸ ಕೈಗೊಂಡಿರುವ ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ ದಕ್ಷಿಣ ಕೊರಿಯಾದೊಂದಿಗೆ ಮಹತ್ವದ ದ್ವಿಪಕ್ಷೀಯ ಮಾತುಕತೆ ನಡೆಸಿದ್ದಾರೆ. ಈ ವೇಳೆ ಎನ್.ಡಿ.ಎ ಸರ್ಕಾರ ರಕ್ಷಣಾ ಕ್ಷೇತ್ರದಲ್ಲಿ ವಿದೇಶಿ ನೇರ ಬಂಡವಾಳ ಹೂಡಿಕೆ ಉದಾರೀಕರಣ ಜಾರಿ ಮಾಡಿರುವ ಹಿನ್ನೆಲೆಯಲ್ಲಿ ಮೇಕ್ ಇನ್ ಇಂಡಿಯಾ ಮೂಲಕ ಭಾರತದ ಉತ್ಪಾದನಾ ಕ್ಷೇತ್ರದಲ್ಲಿ ಹೂಡಿಕೆ ಮಾಡಲು ಕೊರಿಯಾ ದೇಶವನ್ನು ಆಹ್ವಾನಿಸಿದ್ದಾರೆ.
ಸುಷ್ಮಾ ಸ್ವರಾಜ್, ದಕ್ಷಿಣ ಕೊರಿಯಾದ ರಕ್ಷಣಾ ಸಚಿವ ಜನರಲ್ ಹ್ಯಾನ್ ಮಿನ್-ಗು ರೊಂದಿಗೆ ಮಾತುಕತೆ ನಡೆಸಿದ್ದು ರಕ್ಷಣಾ ಹಾಗೂ ಸೈಬರ್ ಭದ್ರತೆ ವಿಷಯಕ್ಕೆ ಸಂಬಂಧಿಸಿದಂತೆ ದ್ವಿಪಕ್ಷೀಯ ಸಂಬಂಧಗಳನ್ನು ಬಲಗೊಳಿಸಲು ಉಭಯ ನಾಯಕರೂ ಒಪ್ಪಿಗೆ ಸೂಚಿಸಿದ್ದಾರೆ. ಅಲ್ಲದೇ ಜನವರಿಯಲ್ಲಿ ಭಾರತದ ರಕ್ಷಣಾ ಸಚಿವ ಮನೋಹರ್ ಪರೀಕ್ಕರ್ ದಕ್ಷಿಣ ಕೊರಿಯಾಗೆ ಭೇಟಿ ನೀಡಿ, ರಕ್ಷಣಾ ಸಹಕಾರದ ಬಗ್ಗೆ ಚರ್ಚೆ ನಡೆಸಲಿದ್ದಾರೆ ಎಂದು ತಿಳಿದುಬಂದಿದೆ.
ಇದೇ ವೇಳೆ ಕೊರಿಯಾದ ರಾಷ್ಟ್ರೀಯ ಭದ್ರತಾ ಸಲಹೆಗಾರ ಕಿಮ್ ಕ್ವಾನ್-ಜಿನ್ ಅವರೊಂದಿಗೆ ಪ್ರತ್ಯೇಕ ಸಭೆ ನಡೆಸಿರುವ ಸುಷ್ಮಾ ಸ್ವರಾಜ್, ಸೈಬರ್ ಭದ್ರತಾ ಸಹಕಾರದ ಸಾಧ್ಯತೆಗಳ ಬಗ್ಗೆಯೂ ಚರ್ಚೆ ನಡೆಸಿದ್ದಾರೆ.