ಜಾರ್ಖಂಡ್/ಜಮ್ಮು-ಕಾಶ್ಮೀರ : 'ಜಾರ್ಖಂಡ್' ಹಾಗೂ ಜಮ್ಮು-ಕಾಶ್ಮೀರ ವಿಧಾನಸಭೆ ಚುನಾವಣೆಯ ಫಲಿತಾಂಶ ಚುನಾವಣೋತ್ತರ ಸಮೀಕ್ಷೆಗಳ ನಿರೀಕ್ಷೆಯಂತೆಯೇ ಪ್ರಕಟವಾಗಿದ್ದು ಜಾರ್ಖಂಡ್ ನಲ್ಲಿ ಬಿಜೆಪಿಗೆ ಸ್ಪಷ್ಟ ಬಹುಮತ ದೊರೆತಿದ್ದು ಸರ್ಕಾರ ರಚಿಸಲಿದೆ.
ಚುನಾವಣೋತ್ತರ ಸಮೀಕ್ಷೆಗಳ ನಿರೀಕ್ಷೆಯಂತೆಯೇ ಜಮ್ಮು-ಕಾಶ್ಮೀರದಲ್ಲಿ ಅತಂತ್ರ ಸ್ಥಿತಿ ನಿರ್ಮಾಣವಾಗಿದೆ. ಯಾವುದೇ ಪಕ್ಷಕ್ಕೂ ಬಹುಮತ ದೊರೆತಿಲ್ಲ.
ಜಾರ್ಖಂಡ್ ನಲ್ಲಿ 81 ಸ್ಥಾನಗಳ ಪೈಕಿ ಬಿಜೆಪಿ 42 ಸ್ಥಾನಗಳನ್ನು ಮುನ್ನಡೆ ಕಾಯ್ದುಕೊಳ್ಳುವ ಮೂಲಕ ಸ್ಪಷ್ಟ ಬಹುಮತದತ್ತ ಮುನ್ನುಗ್ಗುತ್ತಿದೆ. ಜೆಎಂಎಂ 20 ಹಾಗೂ ಕಾಂಗ್ರೆಸ್ 5 ಸ್ಥಾನಗಳಲ್ಲಿ ಮುನ್ನಡೆ ಸಾಧಿಸಿದ್ದರೆ, ಜೆವಿಎಂ 9 ಹಾಗೂ ಇತರರು 5 ಸ್ಥಾನಗಳಲ್ಲಿ ಮುನ್ನಡೆ ಕಾಯ್ದುಕೊಂಡಿದ್ದಾರೆ.
ಜಮ್ಮು-ಕಾಶ್ಮೀರದಲ್ಲಿ 23 ಕ್ಷೇತ್ರಗಳಲ್ಲಿ ಬಿಜೆಪಿ ಮುನ್ನಡೆ ಕಾಯ್ದುಕೊಂಡಿದೆ. 27 ಸ್ಥಾನಗಳಲ್ಲಿ ಮುನ್ನಡೆ ಸಾಧಿಸಿರುವ ಪಿಡಿಪಿ ಕಣಿವೆ ರಾಜ್ಯದಲ್ಲಿ ಏಕೈಕ ಅತಿ ದೊಡ್ಡ ಪಕ್ಷವಾಗಿ ಹೊರಹೊಮ್ಮುವ ಸಾಧ್ಯತೆ ಇದೆ. ಆದರೆ ಪಿಡಿಪಿಗೆ ಸ್ಪಷ್ಟ ಬಹುಮತ ಸಿಗುವ ಸಾಧ್ಯತೆ ಕಡಿಮೆ ಇದ್ದು, ಬಿಜೆಪಿಯೊಂದಿಗೆ ಮೈತ್ರಿ ಮಾಡಿಕೊಳ್ಳಲು ಸಿದ್ಧತೆ ನಡೆಸಿದೆ.
ಜಮ್ಮು-ಕಾಶ್ಮೀರದ ಚುನಾವಣಾ ಫಲಿತಾಂಶದ ಬಗ್ಗೆ ಪ್ರತಿಕ್ರಿಯಿಸಿರುವ ಪಿಡಿಪಿ ವಕ್ತಾರ ನಹೀಮ್ ಅಖ್ತರ್, ಬಿಜೆಪಿಯೊಂದಿಗೆ ಸರ್ಕಾರ ರಚಿಸಲು ನಾವು ಸಿದ್ಧ ಎಂದು ಹೇಳಿದ್ದಾರೆ.