ವಾಷಿಂಗ್ ಟನ್ : 'ಎಬೋಲಾ ಖಾಯಿಲೆ' ವಿರುದ್ಧ ಹೋರಾಡುತ್ತಿರುವವರು ಟೈಮ್ ಮ್ಯಾಗಜೀನ್ ನ 2014 ನೇ ವರ್ಷದ ವ್ಯಕ್ತಿಯಾಗಿ ಆಯ್ಕೆಯಾಗಿದ್ದಾರೆ.
ಪ್ರಸಕ್ತ ಸಾಲಿನಲ್ಲಿ ಟೈಮ್ ಮ್ಯಾಗಜೀನ್ ತನ್ನ ವರ್ಷದ ವ್ಯಕ್ತಿಯಾಗಿ ಯಾವುದೇ ವ್ಯಕ್ತಿಯನ್ನು ಘೋಷಣೆ ಮಾಡಲಾಗಿಲ್ಲ. ಬದಲಾಗಿ ಎಬೋಲಾ ರೋಗದ ವಿರುದ್ಧ ಹೋರಾಡುತ್ತಿರುವ ವೈದ್ಯರು, ನರ್ಸ್, ರೋಗಿಗಳ ಬಗ್ಗೆ ಕಾಳಜಿ ಹೊಂದಿರುವ ಗುಂಪಿಗೆ ವರ್ಷದ ವ್ಯಕ್ತಿ ಗೌರವ ದೊರೆತಿದೆ ಎಂದು ಟೈಮ್ ನ ಸಂಪಾದಕರು ಘೋಷಿಸಿದ್ದಾರೆ.
ವಿಶ್ವದ 50 ನಾಯಕರು ವರ್ಷದ ವ್ಯಕ್ತಿ ಸ್ಥಾನಕ್ಕಾಗಿ ಸೆಣೆಸುತ್ತಿದ್ದರು. ವ್ಯಕ್ತಿಯ ಆಯ್ಕೆಗಾಗಿ ಟೈಮ್ ಮ್ಯಾಗಜೀನ್ ಅಂತರ್ಜಾಲದ ಮೂಲಕ ಚುನಾವಣೆ ನಡೆಸಿತ್ತು. ವಿಶ್ವದ 50 ನಾಯಕರ ಪೈಕಿ ಒಬ್ಬರಾಗಿದ್ದ ಪ್ರಧಾನಿ ನರೇಂದ್ರ ಮೋದಿ ಅವರು ಶೇ.16ರಷ್ಟು ಮತಪಡೆಯುವ ಮೂಲಕ ಟೈಮ್ ಮ್ಯಾಗಜೀನ್ ನಡೆಸಿದ್ದ ಸಮೀಕ್ಷೆಯಲ್ಲಿ ಜಯಗಳಿಸಿದ್ದರು. ಪ್ರಧಾನಿ ಮೋದಿ ಅವರಿಗೇ ಹೆಚ್ಚು ಮತ ದೊರೆತಿದೆಯಾದರೂ ಅಂತಿಮ ಹಂತದಲ್ಲಿ ಟೈಮ್ ನ ಸಂಪಾದಕರು ವರ್ಷದ ವ್ಯಕ್ತಿಗೆ ಮೋದಿ ಅವರನ್ನು ಕೈಬಿಟ್ಟು ಎಬೋಲಾ ರೋಗದ ವಿರುದ್ಧ ಹೋರಾಡುತ್ತಿರುವವರನ್ನು ಆಯ್ಕೆ ಮಾಡಿದ್ದಾರೆ.
ವಿಶಿಷ್ಠ ಸಾಧನೆ ಹೆಚ್ಚು ಜನಪ್ರಿಯತೆ ಗಳಿಸಿದ ವ್ಯಕ್ತಿಗಳನ್ನು ಆಯ್ದು ವರ್ಷದ ವ್ಯಕ್ತಿ ಗೌರವ ನೀಡುವ ಪ್ರಕ್ರಿಯೆಯನ್ನು ಟೈಮ್ ಮ್ಯಾಗಜೀನ್ 1927ರಿಂದ ಪ್ರಾರಂಭಿಸಿದೆ.