ಚೆನ್ನೈ : 2014ರ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ನೇತೃತ್ವದ ಎನ್.ಡಿ.ಎ ಮೈತ್ರಿಕೂಟ ಸೇರಿದ್ದ ವೈಕೋ ನೇತೃತ್ವದ ಎಂಡಿಎಂಕೆ, ಎನ್.ಡಿ.ಎ ಮೈತ್ರಿಕೂಟ ತೊರೆಯುವ ನಿರ್ಧಾರ ಕೈಗೊಂಡಿದೆ.
ಕೇಂದ್ರ ಸರ್ಕಾರದ ವಿರುದ್ಧ ತೀವ್ರ ಅಸಮಾಧಾನ ವ್ಯಕ್ತಪಡಿಸಿರುವ ಎಂಡಿಎಂಕೆ ಪಕ್ಷದ ವರಿಷ್ಠ ವೈಕೋ, ಜಿಲ್ಲಾ ಕಾರ್ಯದರ್ಶಿಗಳ ಸಭೆ ನಡೆಸಿ ಎನ್.ಡಿ.ಎ ಮೈತ್ರಿಕೂಟದಿಂದ ಹೊರ ಬರುವ ನಿರ್ಣಯ ಕೈಗೊಂಡಿದ್ದಾರೆ. ಅಲ್ಲದೆ ಯಾವುದೇ ವಿಷಯದಲ್ಲೂ ಭಾರತ, ಶ್ರೀಲಂಕಾಗೆ ಬೆಂಬಲ ನೀಡಬಾರದು ಎಂದು ವೈಕೋ ಕೇಂದ್ರ ಸರ್ಕಾರವನ್ನು ಒತ್ತಾಯಿಸಿದ್ದಾರೆ.
ಇದೇ ವೇಳೆ ಶ್ರೀಲಂಕಾ ತಮಿಳರ ವಿಷಯಕ್ಕೆ ಸಂಬಂಧಿಸಿದಂತೆ ನರೇಂದ್ರ ಮೋದಿ ಸರ್ಕಾರ ತಮಿಳರಿಗೆ ಮೋಸ ಮಾಡಿದೆ ಮತ್ತು ಕೇಂದ್ರ ಸರ್ಕಾರ ತಮಿಳು ವಿರೋಧಿ ಕ್ರಮಗಳನ್ನು ತೆಗೆದುಕೊಳ್ಳುತ್ತಿದ್ದು ರಾಜ್ಯದ ಅಭಿವೃದ್ಧಿಗೆ ಗಮನ ನೀಡುತ್ತಿಲ್ಲ ಎಂದು ವೈಕೋ ಆರೋಪಿಸಿದ್ದಾರೆ.
ಎಲ್.ಟಿ.ಟಿಇ ಬೆಂಬಲಿಸುತ್ತಿರುವ ವೈಕೋ ಅವರಿಗೆ ಪ್ರಧಾನಿ ನರೇಂದ್ರ ಮೋದಿ ಅವರು ಶ್ರೀಲಂಕಾ ಅಧ್ಯಕ್ಷ ಮಹಿಂದಾ ರಾಜಪಕ್ಸೆ ಅವರೊಂದಿಗೆ ಸಂಬಂಧ ವೃದ್ಧಿಗೆ ಯತ್ನಿಸಿದ್ದು ತೀವ್ರ ಬೇಸರ ತಂದಿರುವ ಹಿನ್ನೆಲೆಯಲ್ಲಿ ಎನ್.ಡಿ.ಎ ಮೈತ್ರಿಕೂಟ ತೊರೆಯುವ ಸಾಧ್ಯತೆ ಇದೆ.