ಮುಂಬೈ : 'ಇರಾಕ್' ನ ಐ.ಎಸ್.ಐ.ಎಸ್ ಉಗ್ರ ಸಂಘಟನೆ ಸೇರಿದ್ದ ಮುಂಬೈ ಮೂಲದ ಯುವಕ, ಅರೀಬ್ ಮಜೀದ್ ತರಬೇತಿ ಪಡೆದ ಆತ್ಮಾಹುತಿ ಬಾಂಬರ್ ಎಂಬ ಸ್ಫೋಟಕ ವಿಷಯ ಹೊರಬಿದ್ದಿದೆ.
ಸಿರಿಯಾದ ರಕ್ಷಣಾ ದಳದ ಮೇಲೆ ಆತ್ಮಾಹುತಿ ದಾಳಿ ಮಾಡಲು ಪ್ರಯತ್ನಿಸಿ ತಾನು ವಿಫಲನಾಗಿದ್ದೆ ಎಂದು ಅರೀಬ್ ಎನ್.ಐ.ಎ ವಿಚಾರಣೆ ವೇಳೆ ಸ್ಪಷ್ಟಪಡಿಸಿದ್ದಾನೆ. ಅಲ್ಲದೇ ಮುಂಬೈಗೆ ಬಂದ ಕೂಡಲೇ ಬಂಧನಕ್ಕೊಳಗಾಗಿದ್ದ ಅರೀಬ್ ತಾನು ಐ.ಎಸ್.ಐ.ಎಸ್ ಗೆ ಸೇರಿದ್ದಕ್ಕೆ ಯಾವುದೇ ರೀತಿಯ ಪಶ್ಚಾತಾಪವೂ ಇಲ್ಲ ಎಂದು ಹೇಳಿಕೊಂಡಿದ್ದಾನೆ.
ರಾಷ್ಟ್ರೀಯ ತನಿಖಾ ದಳದಿಂದ ಮಜೀದ್ ವಿಚಾರಣೆ ನಡೆಯುತ್ತಿದ್ದು ಒಂದೊಂದೇ ಸ್ಫೋಟಕ ಮಾಹಿತಿಗಳು ಹೊರಬೀಳುತ್ತಿವೆ.
ಈ ಹಿಂದೆ ತಾನು ಐ.ಎಸ್.ಐ.ಎಸ್ ನಲ್ಲಿ ಉಗ್ರನಾಗಿರಲಿಲ್ಲ, ಅಲ್ಲಿ ಟಾಯ್ಲೆಟ್ ಕ್ಲೀನ್ ಮಾಡುವ ಕೆಲಸ ಮಾಡುತ್ತಿದ್ದೆ ಎಂದು ಹೇಳಿದ್ದ ಮಜೀದ್, ಹೆಚ್ಚಿನ ವಿಚಾರಣೆಗೊಳಪಡಿಸಿದಾಗ ಆತ್ಮಾಹುತಿ ಬಾಂಬರ್ ಆಗಿ ಪರಿಣತಿ ಹೊಂದಿದ್ದನು ಎಂಬ ವಿಚಾರ ಬಹಿರಂಗಗೊಳಿಸಿದ್ದಾನೆ.
ಐ.ಎಸ್.ಐ.ಎಸ್ ನಲ್ಲಿ ತನ್ನನ್ನು ಯಾರೂ ನಂಬಲಿಲ್ಲ ಎಂದು ಈ ಹಿಂದೆ ಮಜೀದ್ ಎನ್.ಐ.ಎ ಪೊಲೀಸರಿಗೆ ಹೇಳಿಕೆ ನೀಡಿದ್ದ.