ಬೆಂಗಳೂರು : 'ಜೆಡಿಎಸ್' ನಲ್ಲಿ ಮತ್ತೊಮ್ಮೆ ಭಿನ್ನಮತ ಸ್ಫೋಟಗೊಂಡಿದೆ. ಡಿ.4ರಂದು ಬೆಂಗಳೂರಿನಲ್ಲಿ ಶಾಸಕಾಂಗ ಪಕ್ಷದ ನಾಯಕ ಹೆಚ್.ಡಿ ಕುಮಾರಸ್ವಾಮಿ ನೇತೃತ್ವದಲ್ಲಿ ನಡೆದ ಜೆಡಿಎಸ್ ಶಾಸಕಾಂಗ ಪಕ್ಷದ ಸಭೆಗೆ ಕೇವಲ 12 ಶಾಸಕರು ಮಾತ್ರ ಹಾಜರಾಗಿದ್ದಾರೆ.
ಶಾಸಕಾಂಗ ಪಕ್ಷದ ಸಭೆಗೆ ಗೈರು ಹಾಜರಾಗಿರುವ ಶಾಸಕರ ಬಗ್ಗೆ ಪ್ರತಿಕ್ರಿಯಿಸಿದ ಜೆಡಿಎಸ್ ರಾಜ್ಯಾಧ್ಯಕ್ಷ ಹೆಚ್.ಡಿ ಕುಮಾರಸ್ವಾಮಿ, ಜೆಡಿಎಸ್ ನ ಸಾಕಷ್ಟು ಶಾಸಕರು ಪಕ್ಷ ಮೀರಿ ಬೆಳೆದಿದ್ದಾರೆ. ಅವರಿಗೆ ಶಾಸಕಾಂಗ ಪಕ್ಷದ ಸಭೆಯಲ್ಲಿ ಪಾಲ್ಗೊಂಡರೆ ಅವಮಾನವಾಗುತ್ತದೆ ಆದ್ದರಿಂದ ಸಭೆಯಲ್ಲಿ ಪಾಲ್ಗೊಂಡಿಲ್ಲ ಎಂದು ಲೇವಡಿ ಮಾಡಿದ್ದಾರೆ.
ಶಾಸಕಾಂಗ ಪಕ್ಷದ ಸಭೆಯಲ್ಲಿ ಹೆಚ್.ಡಿ.ಕೆ ಆಪ್ತರಾದ ಜಮೀರ್ ಅಹಮದ್ ಅವರೂ ಸೇರಿದಂತೆ ಒಟ್ಟು 28 ಶಾಸಕರು ಗೈರು ಹಾಜರಾಗಿದ್ದಾರೆ. ಕೆಲ ಶಾಸಕರ ಗೈರು ಹಾಜರಿಯನ್ನು ಸಮರ್ಥಿಸಿಕೊಂಡ ಕುಮಾರಸ್ವಾಮಿ, ಕೆಲ ಶಾಸಕರು ಸ್ವಕ್ಷೇತ್ರದಲ್ಲಿ ಕೆಲಸವಿದ್ದ ಕಾರಣ ಗೈರು ಹಾಜರಾಗುವ ಬಗ್ಗೆ ಪೂರ್ವಾನುಮತಿ ಪಡೆದಿದ್ದರು ಎಂದಿದ್ದಾರೆ.
ಪದೇ ಪದೇ ಜೆಡಿಎಸ್ ನಲ್ಲಿ ಭಿನ್ನಮತ ಸ್ಫೋಟಗೊಳ್ಳುತ್ತಿದ್ದು, ಪ್ರತಿ ಬಾರಿಯಂತೆ ಈ ಬಾರಿಯೂ ಜಮೀರ್ ಅಹಮದ್ ಖಾನ್ ಪಕ್ಷದ ಶಾಸಕಾಂಗ ಸಭೆಗೆ ಗೈರು ಹಾಜರಾಗುವ ಮೂಲಕ ಹೆಚ್.ಡಿ.ಕೆ ನಾಯಕತ್ವಕ್ಕೆ ಪರೋಕ್ಷವಾಗಿ ವಿರೋಧ ವ್ಯಕ್ತಪಡಿಸಿದ್ದಾರೆ.