ನವದೆಹಲಿ : 'ಐಪಿಎಲ್'6ನೇ ಆವೃತ್ತಿಯ ಸ್ಪಾಟ್ ಫಿಕ್ಸಿಂಗ್ ಮತ್ತು ಬೆಟ್ಟಿಂಗ್ ಪ್ರಕರಣದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ಮಾಲಿಕ ಗುರುನಾಥ್ ಮೇಯಪ್ಪನ್ ಪ್ರಮುಖ ಆರೋಪಿಯಾಗಿರುವ ಹಿನ್ನೆಲೆಯಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ತಂಡವನ್ನು ರದ್ದುಗೊಳಿಸುವಂತೆ ಬಿಸಿಸಿಐಗೆ ಸುಪ್ರೀಂ ಕೋರ್ಟ್ ಆದೇಶಿಸಿದೆ.
ಮುದ್ಗಲ್ ಸಮಿತಿಯ ವರದಿಯನ್ನು ಪಾಲಿಸುವಂತೆ ಬಿಸಿಸಿಐಗೆ ಸೂಚಿಸಿರುವ ಸುಪ್ರೀಂಕೋರ್ಟ್, ನಿಯಮಗಳನ್ನು ಗಾಳಿಗೆ ತೂರಿ ಸ್ಪಾಟ್ ಫಿಕ್ಸಿಂಗ್ ಮತ್ತು ಬೆಟ್ಟಿಂಗ್ ಪ್ರಕರಣದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ನ ಮಾಲೀಕರು ಭಾಗಿಯಾಗಿರುವುದರಿಂದ ಸಿ.ಎಸ್.ಕೆ ತಂಡವನ್ನು ಐಪಿಎಲ್ನಿಂದ ರದ್ದುಗೊಳಿಸುವಂತೆ ಸೂಚಿಸಿದೆ. ಅಲ್ಲದೆ ಬಿಸಿಸಿಐ ಅಧ್ಯಕ್ಷ ಸ್ಥಾನಕ್ಕೆ ಹೊಸದಾಗಿ ಚುನಾವಣೆ ನಡೆಸಿ, ನೂತನ ಸಮಿತಿ ರಚಿಸುವಂತೆ ಬಿಸಿಸಿಐಗೆ ಆದೇಶಿಸಿದೆ.
ಇದೇ ವೇಳೆ ಭಾರತ ಕ್ರಿಕೆಟ್ ನಿಯಂತ್ರಣ ಮಂಡಳಿ(ಬಿಸಿಸಿಐ) ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸದಂತೆ ಬಿಸಿಸಿಐ ಮಾಜಿ ಅಧ್ಯಕ್ಷ ಎನ್. ಶ್ರೀನಿವಾಸನ್ ಗೆ ಸುಪ್ರೀಂ ಕೋರ್ಟ್ ಸೂಚಿಸಿದೆ.
ಅಲ್ಲದೆ ಇಂಡಿಯಾ ಸಿಮೆಂಟ್ನಲ್ಲಿ ಶ್ರೀನಿವಾಸನ್ ಅವರ ಷೇರು ಬಗ್ಗೆ ಮಾಹಿತಿ ನೀಡಬೇಕೆಂದು ಇಂಡಿಯಾ ಸಿಮೆಂಟ್ ಸಂಸ್ಥೆಗೆ ಸೂಚಿಸಲಾಗಿದೆ.