ಮುಂಬೈ : ಮಹಾರಾಷ್ಟ್ರದಲ್ಲಿ ಅಲ್ಪಮತದ ಮೂಲಕ ಅಧಿಕಾರಕ್ಕೆ ಬಂದಿದ್ದ ಬಿಜೆಪಿ ವಿಶ್ವಾಸಮತ ಸಾಬಿತು ಪಡಿಸುವಲ್ಲಿ ಯಶಸ್ವಿಯಾಗಿದೆ.
ಮಹಾರಾಷ್ಟ್ರ ವಿಧಾನಸಭೆಯಲ್ಲಿ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ಧ್ವನಿಮತದ ಮೂಲಕ ಬಹುಮತ ಸಾಬೀತುಪಡಿಸಿದ್ದಾರೆ. ಈ ಮೂಲಕ ಶಿವಸೇನೆಗೆ ಭಾರೀ ಮುಖಭಂಗವಾದಂತಾಗಿದೆ.
ಒಟ್ಟು 288 ಸದಸ್ಯ ಬಲದ ಮಹಾರಾಷ್ಟ್ರ ವಿಧಾನಸಭೆಯಲ್ಲಿ ಬಿಜೆಪಿ 121 ಸದಸ್ಯರನ್ನು ಹೊಂದಿದ್ದು, ಸರಳ ಬಹುಮತಕ್ಕೆ 148 ಶಾಸಕರ ಬೆಂಬಲ ಬೇಕಾಗಿತ್ತು. ಬಾಹ್ಯ ಬೆಂಬಲ ನೀಡುವುದಾಗಿ ಘೋಷಿಸಿದ್ದ ಎನ್ ಸಿಪಿ ವಿಶ್ವಾಸಮತಯಾಚನೆ ವೇಳೆ ಗೈರು ಹಾಜರಾಗುವ ಮೂಲಕ ಬಿಜೆಪಿ ಸರ್ಕಾರಕ್ಕೆ ಪರೋಕ್ಷ ಬೆಂಬಲ ನೀಡಿದೆ.
ಇದಕ್ಕೂ ಮುನ್ನ ಮಹಾರಾಷ್ಟ್ರ ವಿಧಾಸಭೆಯ ನೂತನ ಸ್ಪೀಕರ್ ಆಯ್ಕೆ ನಡೆಯಿತು. ಬಿಜೆಪಿಯ ಹರಿಭಾವು ಬಾಗ್ಡೆ ಅವರು ಸ್ಪೀಕರ್ ಆಗಿ ಅವಿರೋಧವಾಗಿ ಆಯ್ಕೆಯಾದರು.
ಮಹಾರಾಷ್ಟ್ರ ಸ್ಪೀಕರ್ ಸ್ಥಾನಕ್ಕೆ ತ್ರಿಕೋನ ಸ್ಪರ್ಧೆ ಏರ್ಪಟ್ಟಿತ್ತು. ಬಿಜೆಪಿ-ಶಿವಸೇನೆ ಹಾಗೂ ಕಾಂಗ್ರೆಸ್ ಮೂರು ಪಕ್ಷಗಳೂ ಸ್ಪೀಕರ್ ಸ್ಥಾನಕ್ಕೆ ನಾಮಪತ್ರ ಸಲ್ಲಿಸಿದ್ದವು. ಆದರೆ ನಾಮಪತ್ರ ವಾಪಸ್ ಪಡೆಯುವಂತೆ ಸಿಎಂ ಫಡ್ನವೀಸ್ ಅವರು ಕಾಂಗ್ರೆಸ್ ಹಾಗೂ ಶಿವಸೇನೆಗೆ ಮನವಿ ಮಾಡಿದ್ದರಿಂದ ಎರಡೂ ಪಕ್ಷಗಳು ನಾಮಪತ್ರಗಳನ್ನು ಹಿಂಪಡೆದಿದ್ದವು. ಹೀಗಾಗಿ ಬಾಗ್ಡೆ ಅವರು ಅವಿರೋಧವಾಗಿ ಆಯ್ಕೆಯಾಗಿದ್ದಾರೆ.