ಗೋವಾ : 'ಮನೋಹರ್ ಪರೀಕ್ಕರ್' ರಾಜೀನಾಮೆಯಿಂದ ತೆರವಾಗುವ ಮುಖ್ಯಮಂತ್ರಿ ಸ್ಥಾನವನ್ನು ತಮಗೇ ನೀಡಬೇಕೆಂದು ಗೋವಾ ಉಪಮುಖ್ಯಮಂತ್ರಿ ಫ್ರಾನ್ಸಿಸ್ ಡಿಸೋಜ ಬೇಡಿಕೆ ಇಟ್ಟಿದ್ದಾರೆ.
ಕೇಂದ್ರದಲ್ಲಿ ಮಹತ್ವವಾದ ಜವಾಬ್ದಾರಿ ವಹಿಸಲಿರುವ ಹಿನ್ನೆಲೆಯಲ್ಲಿ ಗೋವಾ ಮುಖ್ಯಮಂತ್ರಿ ಮನೋಹರ್ ಪರೀಕ್ಕರ್ ರಾಜೀನಾಮೆ ನೀಡುತ್ತಿದ್ದು, ನೂತನ ಸಿ.ಎಂ ಗಾದಿಗೆ ಪೈಪೋಟಿ ಆರಂಭವಾಗಿದೆ. ಆರೋಗ್ಯ ಸಚಿವ ಲಕ್ಷ್ಮಿಕಾಂತ್ ಪರ್ಸೇಕರ್ ಅವರ ಹೆಸರು ಮುಂಚೂಣಿಯಲ್ಲಿರುವುದರಿಂದ ಸಿ.ಎಂ ಸ್ಥಾನವನ್ನು ತಮಗೇ ನೀಡಬೇಕೆಂದು ಡಿಸಿಎಂ ಫ್ರಾನ್ಸಿಸ್ ಡಿಸೋಜ ಹೇಳಿದ್ದಾರೆ.
"ನಾನು ಮುಖ್ಯಮಂತ್ರಿಯಾಗಲು ಅರ್ಹನಾಗಿದ್ದೇನೆ, ನನಗಿಂತಲೂ ಕಿರಿಯರ ನೇತೃತ್ವದ ಸರ್ಕಾರದಲ್ಲಿ ನಾನು ಸಚಿವನಾಗಿ ಕಾರ್ಯನಿರ್ವಹಿಸುವುದು ಸಾಧ್ಯವಿಲ್ಲ" ಎಂದು ಮಾಧ್ಯಮಗಳಿಗೆ ಡಿಸೋಜ ತಿಳಿಸಿದ್ದಾರೆ. ಒಂದು ವೇಳೆ ತಮ್ಮನ್ನು ಸಿ.ಎಂ ಮಾಡದೇ ಇದ್ದರೆ ಡಿ.ಸಿ.ಎಂ ಹಾಗೂ ಪಕ್ಷಕ್ಕೆ ರಾಜೀನಾಮೆ ನೀಡುವುದಾಗಿ ಬೆದರಿಕೆ ಹಾಕಿದ್ದಾರೆ. ಈ ಹಿನ್ನೆಲೆಯಲ್ಲಿ ಗೋವಾ ನೂತನ ಸಿ.ಎಂ ಆಯ್ಕೆ ಕಗ್ಗಂಟಾಗುವ ಸಾಧ್ಯತೆ ಇದೆ.
ಗೋವಾದ ಅಲ್ಪಸಂಖ್ಯಾತರು ಕಾಂಗ್ರೆಸ್ ಗೆ ಪರ್ಯಾಯವಾಗಿ ಬಿಜೆಪಿಯ ಬಗ್ಗೆ ವಿಶ್ವಾಸ ಹೊಂದಿದ್ದರು. ಈ ಹಿನ್ನೆಲೆಯಲ್ಲಿ ಬಿಜೆಪಿ ಅಲ್ಪಸಂಖ್ಯಾತರಾದ ಕ್ಯಾಥೋಲಿಕ್ ಗಳನ್ನು ಕಡೆಗಣಿಸಲು ಸಾಧ್ಯವಿಲ್ಲ ಎಂದಿ ಡಿಸೋಜ ಹೇಳಿದ್ದಾರೆ.
ಮನೋಹರ್ ಪರೀಕ್ಕರ್ ರಾಜೀನಾಮೆಯಿಂದ ತೆರವಾಗುವ ಸಿ.ಎಂ ಹುದ್ದೆಗೆ ಕ್ಯಾಥೋಲಿಕ್ ನಾಯಕನನ್ನು ನೇಮಿಸಬೇಕೆಂಬ ಒತ್ತಾಯ ಕೇಳಿಬರುತ್ತಿದೆ. ನ.8ರಂದು ಬಿಜೆಪಿ ವೀಕ್ಷಕರು ಗೋವಾಕ್ಕೆ ಆಗಮಿಸಲಿದ್ದು, ನೂತನ ಸಿ.ಎಂ ನೇಮಕ ಸಂಬಂಧ ಅಂತಿಮ ನಿರ್ಧಾರ ಹೊರಬೀಳುವ ಸಾಧ್ಯತೆ ಇದೆ.