ನವದೆಹಲಿ : ಪ್ರಧಾನಿ ನರೇಂದ್ರ ಮೋದಿ ಈಗ ಜಗತ್ತಿನ ಅತಿ ಪ್ರಭಾವಿ ವ್ಯಕ್ತಿಗಳ ಪೈಕಿ ಒಬ್ಬರಾಗಿದ್ದಾರೆ! ಫೋರ್ಬ್ಸ್ ಬಿಡುಗಡೆ ಮಾಡಿರುವ 2014ನೇ ಸಾಲಿನ ಪ್ರಭಾವಿ ವ್ಯಕ್ತಿಗಳ ಪಟ್ಟಿಯಲ್ಲಿ ಪ್ರಧಾನಿ ಮೋದಿ 15ನೇ ಸ್ಥಾನ ಪಡೆದಿದ್ದಾರೆ.
ಫೋರ್ಬ್ಸ್ ಬಿಡುಗಡೆ ಮಾಡಿರುವ ಪಟ್ಟಿಯಲ್ಲಿ 72 ಜನರ ಹೆಸರಿದ್ದು ರಷ್ಯಾದ ಅಧ್ಯಕ್ಷ ವ್ಲಾದಿಮಿರ್ ಪುತಿನ್ ಜಗತ್ತಿನ ಅತಿ ಪ್ರಭಾವಿತ ವ್ಯಕ್ತಿಗಳಲ್ಲಿ ಮೊದಲಿಗರಾಗಿದ್ದಾರೆ. ಆದರೆ ಮೊದಿ ಪಟ್ಟಿಗೆ ಸೇರ್ಪಡೆಯಾಗುವಾಗಲೇ 15ನೇ ಸ್ಥಾನ ಅಲಂಕರಿಸಿದ್ದಾರೆ ಎಂಬುದು ವಿಶೇಷ.
2014ರ ಲೋಕಸಭಾ ಚುನಾವಣೆಯ ನಂತರ ಪ್ರಧಾನಿ ನರೇಂದ್ರ ಮೋದಿ ಜನಪ್ರಿಯತೆ ವಿದೇಶಗಳಲ್ಲೂ ವ್ಯಾಪಕವಾಗಿದೆ. ಅಮೆರಿಕಾ,ಜಪಾನ್, ನೇಪಾಳಕ್ಕೆ ಮೋದಿ ಭೇಟಿ ನೀಡಿದ ಸಂದರ್ಭದಲ್ಲಿ ಅವರಿಗೆ ದೊರೆತ ಅಭೂತಪೂರ್ವ ಸ್ವಾಗತವನ್ನು ಇಲ್ಲಿ ಸ್ಮರಿಸಬಹುದು.
ಇದೇ ಫೋರ್ಬ್ಸ್ ಪಟ್ಟಿಯಲ್ಲಿ 21ನೇ ಸ್ಥಾನ ಗಳಿಸಿದ್ದ ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ, ಈ ಬಾರಿ ಪಟ್ಟಿಯಿಂದ ಹೊರಗುಳಿದಿರುವುದು ಅಚ್ಚರಿಯ ವಿಷಯ. ಕಳೆದ ವರ್ಷ ಅವರು ಈ ಪಟ್ಟಿಯಲ್ಲಿ 21 ನೇ ಸ್ಥಾನದಲ್ಲಿದ್ದರು. ರಿಲಯನ್ಸ್ ಇಂಡಸ್ಟ್ರೀಸ್ ಮುಖ್ಯಸ್ಥ ಮುಖೇಶ್ ಅಂಬಾನಿ (36ನೇ ಸ್ಥಾನ), ಆರ್ಸೆಲರ್ ಮಿತ್ತಲ್ ಕಂಪನಿಯ ಮುಖ್ಯಸ್ಥ ಲಕ್ಷ್ಮಿ ಮಿತ್ತಲ್(57), ಮೈಕ್ರೋಸಾಫ್ಟ್ ಮುಖ್ಯಸ್ಥ ಸತ್ಯ ನಾಡೆಲ್ಲಾ (64) ಪಟ್ಟಿಯಲ್ಲಿರುವ ಇತರೆ ಭಾರತೀಯರು.