ಪಾಟ್ನಾ : ಸರ್ಕಾರಿ ನಿಯಮ ಉಲ್ಲಂಘಿಸಿ ಅಳಿಯನನ್ನು ಖಾಸಗಿ ಸಹಾಯಕರಾಗಿ ನೇಮಿಸಿದ್ದ ಬಿಹಾರ ಮುಖ್ಯಮಂತ್ರಿ ಜಿತನ್ ರಾಮ್ ಮಾಂಝಿ ರಾಜೀನಾಮೆ ನೀಡಬೇಕೆಂದು ಬಿಹಾರ ಬಿಜೆಪಿ ನಾಯಕ ಸುಶೀಲ್ ಕುಮಾರ್ ಮೋದಿ ಆಗ್ರಹಿಸಿದ್ದಾರೆ.
ಕುಟುಂಬದ ಸದಸ್ಯರನ್ನೇ ನೇಮಿಸಿದ್ದೂ ಅಲ್ಲದೇ ಕುಟುಂಬ ಸದಸ್ಯರನ್ನು ಸಹಾಯಕರಾಗಿ ನೇಮಿಸಿಕೊಳ್ಳಬಾರದೆಂಬ ವಿಷಯ ತಿಳಿದಿರಲಿಲ್ಲ ಎಂದಿರುವ ಜಿತನ್ ರಾಮ್ ಮಾಂಝಿ ವಿರುದ್ಧ ಬಿಜೆಪಿ ಹರಿಹಾಯ್ದಿದೆ. 'ಮಾಂಝಿ ಅವರು ತಮ್ಮ ಅಳಿಯ ದೇವೇಂದ್ರ ಕುಮಾರ್ ಮತ್ತು ಸೋದರಳಿಯ ಸತ್ಯೇಂದ್ರ ಕುಮಾರ್ ಅವರನ್ನು ಕ್ರಮವಾಗಿ ವೈಯಕ್ತಿಕ ಸಹಾಯಕ ಮತ್ತು ಪೀವನ್ ಹುದ್ದೆಗಳಿಗೆ 8 ವರ್ಷದ ಹಿಂದೆ ನೇಮಿಸಿಕೊಂಡಿದ್ದರು'. ಆದರೂ ಸಹ ಅವರಿಗೆ ಸಚಿವ ಸಂಪುಟ ಕಾರ್ಯದರ್ಶಿ ಇಲಾಖೆ ನಿಯಮಾವಳಿಗಳ ಬಗ್ಗೆ ತಿಳಿದಿರಲಿಲ್ಲವೇ ಎಂದು ಪ್ರಶ್ನಿಸಿದೆ.
ತಮ್ಮ ವೈಯಕ್ತಿಕ ನೌಕರರಾಗಿ ಯಾವುದೇ ಕುಟುಂಬ ಸದಸ್ಯನನ್ನು ನೇಮಿಸಿಕೊಳ್ಳದಂತೆ ಮುಖ್ಯಮಂತ್ರಿ ಮತ್ತು ಇತರ ಮಂತ್ರಿಗಳು ಸರ್ಕಾರದ ಮುಖ್ಯ ಕಾರ್ಯದರ್ಶಿಗೆ ತಿಳುವಳಿಕೆ ಪತ್ರ ಕೊಡಬೇಕಾಗಿರುವುದರಿಂದ ಆ ಅಪರಾಧವನ್ನು ಸಮರ್ಥಿಕೊಳ್ಳುವಹಾಗೆಯೇ ಇಲ್ಲ ಎಂದು ದೂರಿದ್ದಾರೆ. ಆದರರೂ ತಮ್ಮ ನಡೆಯನ್ನು ಸಮರ್ಥಿಸಿಕೊಂಡಿರುವ ಮಾಂಝಿ ಅವರದ್ದು "ನೈತಿಕ ದಿವಾಳಿತನ" ಎಂದು ಬಿಜೆಪಿ ದೂರಿದೆ. ಮುಖ್ಯಮಂತ್ರಿಗಳು ಕೂಡಲೇ ರಾಜೀನಾಮೆ ಕೊಟ್ಟು, ತಮ್ಮ ಕುಟುಂಬದ ಸದಸ್ಯರಿಗೆ ಸರ್ಕಾರ ಕೊಟ್ಟಿರುವ ಸಂಬಳವನ್ನು ವಾಪಸ್ ಪಡೆಯಬೇಕೆಂದು ಸುಶೀಲ್ ಕುಮಾರ್ ಮೋದಿ ಆಗ್ರಹಿಸಿದ್ದಾರೆ.