ನವದೆಹಲಿ : 'ದೆಹಲಿ' ವಿಧಾನಸಭೆ ವಿಸರ್ಜನೆ ಮಾಡಲು ಕೇಂದ್ರ ಸಚಿವ ಸಂಪುಟ ಸಭೆ ಒಪ್ಪಿಗೆ ಸೂಚಿಸಿದೆ. 2015ಫೆಬ್ರವರಿ ವೇಳೆಗೆ ದೆಹಲಿಯಲ್ಲಿ ವಿಧಾನಸಭೆ ಚುನಾವಣೆ ನಡೆಯುವ ಸಾಧ್ಯತೆ ಇದೆ.
ಸರ್ಕಾರ ರಚನೆ ಮಾಡಲು ಬಿಜೆಪಿ ನಿರಾಕರಿಸಿದ ಕಾರಣ ವಿಧಾನಸಭೆ ವಿಸರ್ಜಿಸುವಂತೆ ರಾಜ್ಯಪಾಲ ನಜೀಬ್ ಜಂಗ್ ಶಿಫಾರಸ್ಸು ಮಾಡಿದ್ದರು. ಸಚಿವ ಸಂಪುಟ ಸಭೆಯಲ್ಲಿ ರಾಜ್ಯಪಾಲರ ಶಿಫಾರಸ್ಸನ್ನು ಕೇಂದ್ರ ಸರ್ಕಾರ ಅಂಗೀಕರಿಸಿದೆ. ವಿಧಾನಸಭೆ ವಿಸರ್ಜಿಸಿದ ಆರು ತಿಂಗಳೊಳಗೆ ಚುನಾವಣಾ ಆಯೋಗ ಚುನಾವಣೆ ನಡೆಸಬೇಕಿದ್ದು, ಫೆಬ್ರುವರಿ ವೇಳೆಗೆ ಚುನಾವಣೆ ನಡೆಯುವ ಸಾಧ್ಯತೆ ಇದೆ.
ಚುನಾವಣೆ ನಡೆಯುವುದು ಖಾತ್ರಿಯಾಗಿರುವುದರಿಂದ ನ.4ರ ಸಂಜೆ ಬಿಜೆಪಿ ನಾಯಕರು ಸಭೆ ನಡೆಸುತ್ತಿದ್ದು ಚುನಾವಣಾ ಕಾರ್ಯತಂತ್ರದ ಬಗ್ಗೆ ಚರ್ಚೆ ನಡೆಸಲಿದ್ದಾರೆ. ದೆಹಲಿಯಲ್ಲಿ ಪ್ರಸ್ತುತ ಅರವಿಂದ್ ಕೇಜ್ರಿವಾಲ್ ಅವರ ಜನಪ್ರಿಯತೆ ಕುಗ್ಗಿದೆ. ಮಹಾರಾಷ್ಟ್ರ, ಹರ್ಯಾಣ ವಿಧಾನಸಭೆ ಚುನಾವಣೆಯ ಗೆಲುವಿನಿಂದ ಪ್ರಧಾನಿ ನರೇಂದ್ರ ಮೋದಿ ಅವರ ಜನಪ್ರಿಯತೆ ಹೆಚ್ಚಿದ್ದು ಈ ಬೆಳವಣಿಗೆ ದೆಹಲಿ ಚುನಾವಣೆಯಲ್ಲಿ ಹೆಚ್ಚು ಮತಗಳಿಸಲು ಬಿಜೆಪಿಗೆ ಹೆಚ್ಚು ನೆರವಾಗಲಿದೆ. ಅಲ್ಲದೆ ದೆಹಲಿ ವಿಧಾನಸಭಾ ಚುನಾವಣೆಯಲ್ಲೂ ನರೇಂದ್ರ ಮೋದಿಯವರೇ ಸ್ಟಾರ್ ಪ್ರಚಾರಕರಾಗಲಿದ್ದಾರೆ ಎನ್ನಲಾಗಿದೆ.