ಬೆಂಗಳೂರು : ಗ್ರಾಮಪಂಚಾಯತ್ ಪುನರ್ ವಿಂಗಡಣಾ ಸಮಿತಿ ಅಧ್ಯಕ್ಷ ಮಾಜಿ ಶಾಸಕ ಎಸ್.ಜಿ.ನಂಜಯ್ಯನಮಠ ಗ್ರಾಮ ಪಂಚಾಯಿತಿ ಪುನರ್ ವಿಂಗಡಣಾ ಸಮಿತಿ ವರದಿ 2014ನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಸಲ್ಲಿಸಿದರು.
ವರದಿಯನ್ನು ಸ್ವೀಕರಿಸಿ ಮಾತನಾಡಿದ ಮುಖ್ಯಮಂತ್ರಿಗಳು, ನಮ್ಮ ಪಕ್ಷ ಮತ್ತು ಸರ್ಕಾರ ಅಧಿಕಾರ ವಿಕೇಂದ್ರೀಕರಣಕ್ಕೆ ಬದ್ಧತೆ ಹೊಂದಿದೆ. ಪಂಚಾಯತ್ ರಾಜ್ ವ್ಯವಸ್ಥೆ ಬಲಗೊಳ್ಳಬೇಕು, ಜನರು ಪಂಚಾಯತ್ ರಾಜ್ ವ್ಯವಸ್ಥೆಯಲ್ಲಿ ಸಕ್ರಿಯವಾಗಿ ಭಾಗವಹಿಸಬೇಕು. ಹಾಗೂ ಜನತಂತ್ರ ವಿಕೇಂದ್ರೀಕರಣವಾಗಬೇಕು ಹಾಗೂ ಸಾಮಾಜಿಕ ನ್ಯಾಯ ಸಿಗಬೇಕು ಎಂಬುದು ನಮ್ಮ ಸರ್ಕಾರದ ಮುಖ್ಯ ಉದ್ದೇಶ. ಈ ಸಮಿತಿಯು 30 ಜಿಲ್ಲೆಗಳಲ್ಲಿ ಪ್ರವಾಸ ಮಾಡಿ, ವಿವಿಧ ಸಂಸ್ಥೆಗಳು, ಅಭಿವೃದ್ಧಿಯ ಎಲ್ಲ ಪಾಲುದಾರರು ಹಾಗೂ ರಾಜಕೀಯ ಮುಖಂಡರ ಜೊತೆ ಚರ್ಚಿಸಿ ವರದಿ ಸಲ್ಲಿಸಿದ್ದಾರೆ ಎಂದರು.
ವರದಿಯಲ್ಲಿ 439 ಗ್ರಾಮ ಪಂಚಾಯಿತಿಗಳನ್ನು ಹೆಚ್ಚುವರಿಯಾಗಿ ರಚಿಸುವಂತೆ ಸಲಹೆ ನೀಡಲಾಗಿದೆ. ಆಡಳಿತಾತ್ಮಕ ಮತ್ತು ಅಭಿವೃದ್ಧಿ ದೃಷ್ಟಿಯಿಂದ ಈ ವರದಿಯನ್ನು ಮುಂದಿನ ಗ್ರಾಮ ಪಂಚಾಯಿತಿ ಚುನಾವಣೆಗೆ ಮುನ್ನ ಜಾರಿಗೆ ತರಲಾಗುವುದು ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಎಚ್.ಕೆ.ಪಾಟೀಲ, ಸಮಾಜ ಕಲ್ಯಾಣ ಸಚಿವ ಎಚ್.ಆಚಿಜನೇಯ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಯು.ಟಿ.ಖಾದರ್ ಉಪಸ್ಥಿತರಿದ್ದರು.