ನವದೆಹಲಿ : ವಿದೇಶಗಳಲ್ಲಿ ಕಪುಹಣ ಇಟ್ಟಿರುವ ವ್ಯಕ್ತಿಗಳ ಹೆಸರನ್ನು ಬಹಿರಂಗಪಡಿಸಲು ಸರ್ಕಾರ ಮೀನಾಮೇಷ ಎಣಿಸುತ್ತಿರುವ ಬೆನ್ನಲ್ಲೇ ವಿದೇಶಿ ತೆರಿಗೆಯಲ್ಲಿ ಖಾತೆ ಹೊಂದಿರುವುದನ್ನು ಸ್ಪಷ್ಟಪಡಿಸಿ 136 ಜನ ದಂಡ ಕಟ್ಟಲು ಮುಂದೆ ಬಂದಿದ್ದಾರೆ.
ಎಚ್ಎಸ್ಬಿಸಿ ಬ್ಯಾಂಕಿನ ಸ್ವಿಜರ್ಲೆಂಡ್ನ ಜಿನೇವಾ ಶಾಖೆಯಲ್ಲಿ ಖಾತೆ ಹೊಂದಿರುವ 628 ಭಾರತೀಯರು ಅಥವಾ ಭಾರತೀಯ ಸಂಸ್ಥೆಗಳ ಪೈಕಿ 136 ವ್ಯಕ್ತಿಗಳು ತಾವು ಖಾತೆ ಹೊಂದಿರುವ ವಿಚಾರವನ್ನು ಆದಾಯ ತೆರಿಗೆ ಇಲಾಖೆ ಬಳಿ ಒಪ್ಪಿಕೊಂಡಿದ್ದಾರೆ.
ಆ ಖಾತೆ ಇನ್ನೂ ಅಸ್ತಿತ್ವದಲ್ಲಿರುವ ಬಗ್ಗೆ ತಮಗೆ ಮಾಹಿತಿ ಇರಲಿಲ್ಲ. ಆದಾಯ ಮುಚ್ಚಿಟ್ಟಿದ್ದಕ್ಕಾಗಿ ಪಾವತಿಸಬೇಕಾದ ತೆರಿಗೆ ಹಾಗೂ ದಂಡವನ್ನು ಕಟ್ಟುವುದಾಗಿ ತಿಳಿಸಿದ್ದಾರೆ. 136 ಖಾತೆದಾರರ ಪೈಕಿ ಹಲವರ ಖಾತೆಯಲ್ಲಿ ಶೂನ್ಯ ಮೊತ್ತವಿದೆ. ಈ ಬಗ್ಗೆ ಕಪ್ಪು ಹಣದ ತನಿಖೆಯಲ್ಲಿ ತೊಡಗಿರುವ ಆದಾಯ ತೆರಿಗೆ ಇಲಾಖೆಯ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ ಎಂದು ಆಂಗ್ಲಪತ್ರಿಕೆಯೊಂದು ವರದಿ ಮಾಡಿದೆ.
ಸ್ವಿಜರ್ಲೆಂಡ್ನ ಎಚ್ಎಸ್ಬಿಸಿ ಬ್ಯಾಂಕಿನಲ್ಲಿ ಖಾತೆ ಹೊಂದಿರುವ 628 ಭಾರತೀಯರ ಪೈಕಿ 418 ಮಂದಿಯ ಹೆಸರು, ವಿಳಾಸ ತಾಳೆಯಾಗಿದೆ. ಅದರಲ್ಲಿ 12 ಖಾತೆಗಳು ಕೋಲ್ಕತಾದವರಿಗೆ ಸೇರಿದವಾಗಿವೆ. ಆ ಪೈಕಿ ಆರು ಮಂದಿ ತಾವು ಖಾತೆ ಹೊಂದಿರುವ ವಿಚಾರವನ್ನು ದೃಢಪಡಿಸಿದ್ದಾರೆ. ಇದಲ್ಲದೆ ದೇಶದ ಇಬ್ಬರು ಕೈಗಾರಿಕೋದ್ಯಮಿಗಳು ಎಚ್ಎಸ್ಬಿಸಿ ಜಿನೇವಾ ಶಾಖೆಯಲ್ಲಿ 110 ಕೋಟಿ ರೂ. ಹಣ ಹೊಂದಿರುವ ವಿಚಾರ ಬಯಲಾಗಿದೆ. ಖಾತೆದಾರರ ಪಟ್ಟಿಯಲ್ಲಿ ಮೆಹ್ತಾ ಹಾಗೂ ಪಟೇಲ್ ಎಂಬ ಉಪನಾಮಗಳು ಸರ್ವೇಸಾಮಾನ್ಯದಂತಿವೆ ಎಂದು ಪತ್ರಿಕೆ ವರದಿ ಮಾಡಿದೆ.
ಎಚ್ಎಸ್ಬಿಸಿ ಬ್ಯಾಂಕಿನ ಖಾತೆದಾರರ ಮಾಹಿತಿಯನ್ನು 2006ರಲ್ಲಿ ಅಲ್ಲಿನ ನೌಕರನೊಬ್ಬ ಕಳವು ಮಾಡಿದ್ದ. ಆ ಪಟ್ಟಿಯನ್ನು 2011ರಲ್ಲಿ ಭಾರತಕ್ಕೆ ಫ್ರಾನ್ಸ್ ಹಸ್ತಾಂತರಿಸಿತ್ತು.