ಜಿನೇವಾ : ಪಂಚರಾಷ್ಟ್ರಗಳ ಪ್ರವಾಸದಲ್ಲಿರುವ ಪ್ರಧಾನಿ ನರೇಂದ್ರ ಮೋದಿ, ಸ್ವಿಜರ್ಲೆಂಡ್ ನ ಜಿನೇವಾ ತಲುಪಿದ್ದಾರೆ. ಸ್ವಿಜರ್ಲೆಂಡ್ ಅಧ್ಯಕ್ಷರಾಗಿರುವ ಜೊಹಾನ್ ಸ್ನಿಡರ್ ಅಮ್ಮಾನ್ ಅವರೊಂದಿಗೆ ಮೋದಿ ದ್ವಿಪಕ್ಷೀಯ, ಬಹು ಪಕ್ಷೀಯ ಮತ್ತು ಪ್ರಾದೇಶಿಕ ಮಹತ್ವದ ವಿಷಯಗಳ ಕುರಿತಾಗಿ ಮಾತುಕತೆ ನಡೆಸಲಿದ್ದಾರೆ.
ಸುಮಾರು 50 ದಶಕಗಳ ಬಳಿಕ ಭಾರತದ ಪ್ರಧಾನಿ ಸ್ವಿಜರ್ಲೆಂಡ್ಗೆ ಭೇಟಿ ನೀಡಿದ್ದು, ಇದರಿಂದ ಸಹಜವಾಗಿಯೇ ಈ ಭೇಟಿ ಮಹತ್ವ ಪಡೆದುಕೊಂಡಿದೆ.
ಈಗಾಗಲೇ ಉಭಯ ದೇಶಗಳ ನಾಯಕರುಗಳ ಜತೆ ಮಾತುಕತೆಗೆ ಸಿದ್ಧತೆ ನಡೆದಿದೆ. ಸ್ವಿಸ್ ಬ್ಯಾಂಕುಗಳಲ್ಲಿ ಭಾರತೀಯರು ಕಲೆ ಹಾಕಿರುವ ಕಪ್ಪುಹಣವನ್ನು ಮರಳಿ ಭಾರತಕ್ಕೆ ವಾಪಸ್ ತರುವ ಬಗ್ಗೆ ಚರ್ಚೆ ನಡೆಸಲಿದ್ದಾರೆ.
ಅಲ್ಲದೇ ಪ್ರಧಾನಿ ಮೋದಿ ಅವರು ಕಪ್ಪುಹಣದ ವಿಚಾರವಾಗಿ ಮಾಹಿತಿ ವಿನಿಮಯ ಒಪ್ಪಂದಕ್ಕೆ ಸಹಿ ಮಾಡಬಹುದಾದ ಸಾಧ್ಯತೆಯಿದೆ. ಭಾರತಕ್ಕೆ ಎನ್ಎಸ್ಜಿ ಸದಸ್ಯತ್ವ ಸಿಗಬೇಕೆನ್ನುವ ಬಗ್ಗೆ ಸ್ವಿಜರ್ಲೆಂಡ್ ಕೂಡ ಬೆಂಬಲ ವ್ಯಕ್ತಪಡಿಸಿರುವ ರಾಷ್ಟ್ರವಾಗಿದ್ದು, ಈ ವಿಚಾರವಾಗಿಯೂ ಮಾತುಕತೆ ನಡೆಸುತ್ತಾರೆಂದು ಹೇಳಲಾಗುತ್ತಿದೆ.
ಸ್ವಿಜರ್ಲೆಂಡ್ ಜತೆಗಿನ ಮಾತುಕತೆ ಬಳಿಕ, ಪ್ರಧಾನಿ ನರೇಂದ್ರ ಮೋದಿ ಸಂಜೆ ವೇಳೆಗೆ ಅಮೆರಿಕ ಪ್ರವಾಸ ಕೈಗೊಳ್ಳಲಿದ್ದಾರೆ.