ನವದೆಹಲಿ : ಚೀನಾದ ಜನಪ್ರಿಯ ಕ್ಸಿಯೋಮಿ ಮೊಬೈಲ್ ತಯಾರಕ ಕಂಪನಿಯ ಸ್ಮಾರ್ಟ್ ಫೋನ್ ಗಳನ್ನು ಉಪಯೋಗಿಸುತ್ತಿದ್ದೀರಾ? ಹಾಗಾದರೆ ನೀವು ದೇಶದ ಭದ್ರತೆಗೆ ಅಪಾಯ ಉಂಟುಮಾಡುತ್ತಿದ್ದೀರ ಎಂದೇ ಅರ್ಥ.
ಹೌದು ಇತ್ತೀಚೆಗಷ್ಟೇ ಭಾರತದ ಮಾರುಕಟ್ಟೆ ಪ್ರವೇಶಿಸಿದ್ದ ಚೀನಾದ ಜನಪ್ರಿಯ ಮೊಬೈಲ್ ತಯಾರಕ ಕಂಪನಿಯ ಕ್ಸಿಯೋಮಿ ಮೊಬೈಲ್ ಗಳನ್ನು ಬೇಹುಗಾರಿಕೆಗೆ ಬಳಸಿಕೊಳ್ಳಲಾಗುತ್ತಿದೆ ಎಂಬ ಸ್ಫೋಟಕ ಅಂಶ ಬಯಲಾಗಿದೆ. ದೇಶದ ಭದ್ರತೆಗೆ ಕ್ಸಿಯೋಮಿ ಚೀನಾ ಮೊಬೈಲ್ ಗಳು ಅಪಾಯವೊಡ್ಡುತ್ತಿದೆ ಎಂದು ಭಾರತೀಯ ವಾಯುಪಡೆ ಆರೋಪಿಸಿದೆ.
ಭಾರತೀಯ ವಾಯುಪಡೆ ತನ್ನ ಯೋಧರಿಗೆ ಹಾಗೂ ಅವರ ಕುಟುಂಬಗಳಿಗೆ ನೀಡಿರುವ ಎಚ್ಚರಿಕೆಯಲ್ಲಿ ಕ್ಸಿಯೋಮಿ ಕಂಪನಿಯ ಸ್ಮಾರ್ಟ್ ಫೋನ್ ಹಾಗೂ ನೋಟ್ ಬುಕ್ ಗಳನ್ನು ಬಳಸದಂತೆ ಎಚ್ಚರಿಕೆ ನೀಡಿದೆ. ಮೊಬೈಲ್ ಬಳಕೆದಾರರ ಖಾಸಗಿ ಮಾಹಿತಿಯನ್ನು ಕ್ಸಿಯೋಮಿ ಕಂಪನಿ ಬೀಜಿಂಗ್ ಗೆ ಕಳುಹಿಸುತ್ತಿದೆ ಎಂದು ವಾಯುಪಡೆ ಅಧಿಕಾರಿಗಳು ಎಚ್ಚರಿಸಿದ್ದಾರೆ.
ಸೈಬರ್ ಭದ್ರತೆಗೆ ಕಂಟಕವಾಗಿದ್ದ ಹಿನ್ನೆಲೆಯಲ್ಲಿ ತೈವಾನ್ ಸರ್ಕಾರದಿಂದಲೂ ಕ್ಸಿಯೋಮಿ ತನಿಖೆ ಎದುರಿಸುತ್ತಿದೆ. ಅಲ್ಲದೇ ಅಲ್ಲಿನ ಸರ್ಕಾರ ಕಂಪನಿಯನ್ನು ನಿಷೇಧಿಸುವ ಪ್ರಕ್ರಿಯೆಗೆ ಚಾಲನೆ ನೀಡಿದೆ.
ಮೊಬಲ್ ನಂಬರ್, ಐ.ಎಂ.ಇ.ಐ ನಂಬರ್ ಫೋನ್ ನಲ್ಲಿ ದಾಖಲಾಗಿರುವ ಡೇಟಾ, ಮೆಸೇಜ್ ಗಳನ್ನು ಚೀನಾದೊಂದಿಗೆ ಹಂಚಿಕೆ ಮಾಡಿಕೊಳ್ಳುತ್ತಿರುವುದು ಎಫ್-ಸೆಕ್ಯೂರ್ ಎಂಬ ಕಂಪನಿ ಇತ್ತೀಚೆಗಷ್ಟೇ ಕ್ಸಿಯೋಮಿ ಸ್ಮಾರ್ಟ್ ಫೋನ್ ಗಳನ್ನು ಪರೀಕ್ಷೆಗೆ ಒಳಪಡಿಸಿದ ಸಂದರ್ಭದಲ್ಲಿ ಬೆಳಕಿಗೆ ಬಂದಿದೆ. ಚೀನಾ ಮೊಬೈಲ್ ಗಳಿಂದ ಮಾತ್ರವಲ್ಲದೇ, ಚೀನಾದಿಂದ ಅಭಿವೃದ್ಧಿಯಾಗಿರುವ ಮೊಬೈಲ್ ಆಪ್ ಗಳ ಬಗ್ಗೆಯೂ ವಾಯುಪಡೆ ಅಧಿಕಾರಿಗಳು ಆತಂಕ ವ್ಯಕ್ತಪಡಿಸಿದ್ದಾರೆ.