ಮುಂಬೈ : ಪ್ರಧಾನಿ ನರೇಂದ್ರ ಮೋದಿಯವರ ಕನಸಾದ 'ಮೇಕ್ ಇನ್ ಇಂಡಿಯಾ' ಯೋಜನೆಗೆ ಅದ್ಭುತ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ. ಕಳೆದ ಒಂದು ವರ್ಷದಲ್ಲಿ ಪ್ರಧಾನಿ ಮೋದಿ ಭೇಟಿ ನೀಡಿದ ದೇಶಗಳಿಂದ ಭಾರತಕ್ಕೆ ಈಗಾಗಲೇ 20 ಬಿಲಿಯನ್ ಡಾಲರ್ ಗೂ ಅಧಿಕ ಮೊತ್ತದ ವಿದೇಶಿ ಬಂಡವಾಳ ಹೂಡಿಕೆಯ ರೂಪದಲ್ಲಿ ಹರಿದುಬಂದಿದೆ.
ಈಗ ತೈವಾನ್ ದೇಶದ ಫಾಕ್ಸ್ ಕಾನ್ ಬ್ರಾಂಡ್ ನಿಂದ ಪ್ರಸಿದ್ಧವಾದ ಹೊನ್ ಹೈ ಪ್ರಿಸಿಷನ್ ಇಂಡಸ್ಟ್ರಿ ಸಂಸ್ಥೆ ಮಹಾರಾಷ್ಟ್ರದಲ್ಲಿ 5ಬಿಲಿಯನ್ ಅಮೆರಿಕನ್ ಡಾಲರ್ (ಸುಮಾರು 33,000 ಕೋಟಿ ರೂ.) ಹೂಡಿಕೆಗೆ ಶನಿವಾರ ಒಪ್ಪಂದಕ್ಕೆ ಸಹಿ ಹಾಕಿದೆ. ಈ ಬಂಡವಾಳ ಮುಂದಿನ 5 ವರ್ಷಗಳಲ್ಲಿ ಹೊಸ ಇಲೆಕ್ಟ್ರಾನಿಕ್ ತಯಾರಿಕಾ ಘಟಕಗಳ ಸ್ಥಾಪನೆಗೆ ಬಳಸಲಾಗುತ್ತದೆ.
ಈ ಪ್ರಕಟಣೆಯನ್ನು ಫಾಕ್ಸ್ ಕಾನ್ ಸಂಸ್ಥೆಯ ಸ್ಥಾಪಕ ಟೆರ್ರಿ ಗೋವ್ ಮತ್ತು ಮಹಾರಾಷ್ಟ್ರದ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ಅವರು ಮಹಾರಾಷ್ಟ್ರದ ರಾಜಧಾನಿ ಮುಂಬೈಯಲ್ಲಿ ಒಪ್ಪಂದಕ್ಕೆ ಸಹಿ ಹಾಕಿದ ನಂತರ ಮಾಡಲಾಯಿತು.
ಈ ಸಂದರ್ಭದಲ್ಲಿ ಮಾತನಾಡಿದ ಟೆರ್ರಿ, ಆಪಲ್, ಬ್ಲ್ಯಾಕ್ ಬೆರಿ, ಕ್ಸಿಯೋಮಿ, ಅಮೆಜ್ಹಾನ್ ಮುಂತಾದ ಗ್ರಾಹಕರನ್ನು ಹೊಂದಿದ, ವಿಶ್ವದ ಅತ್ಯಂತ ದೊಡ್ಡ ಗುತ್ತಿಗೆ ಎಲ್ಕ್ಟ್ರಾನಿಕ್ ವಸ್ತುಗಳ ತಯಾರಿಕಾ ಸಂಸ್ಥೆಯಾದ ಫಾಕ್ಸ್ ಕಾನ್ ತನ್ನ ಉದ್ದೇಶಿತ ತಯಾರಿಕಾ ಸೌಲಭ್ಯಕ್ಕಾಗಿ ಸ್ಥಳೀಯ ಪಾರ್ಟ್ನರ್ ಗಾಗಿ ಭಾರತದ ಪಶ್ಚಿಮದ ರಾಜ್ಯದಲ್ಲಿ ಹುಡುಕಾಡುತ್ತಿತ್ತು ಎಂದರು.
ಗುರುವಾರ ನವದೆಹಲಿಯಲ್ಲಿ ಮಾತನಾಡುತ್ತ ಟೆರ್ರಿ ಅವರು, 'ಭಾರತದ ವಿವಿಧ ರಾಜ್ಯಗಳಲ್ಲಿ ಉತ್ಪಾದನಾ ಘಟಕಗಳನ್ನು ಸ್ಥಾಪಿಸುವ ಉದ್ದೇಶ ಹೊಂದಿದ್ದೇವೆ. ಅಲ್ಲದೆ, ವಿಶ್ವದಲ್ಲಿ ಅತ್ಯಂತ ವೇಗವಾಗಿ ವೃದ್ಧಿಸುತ್ತಿರುವ ಸ್ಮಾರ್ಟ್ ಫೋನ್ ಮಾರುಕಟ್ಟೆಗಾಗಿ ಸಂಭಾವ್ಯ ಪಾರ್ಟ್ನರ್ ಗಳ ಹುಡುಕಾಟದಲ್ಲಿದ್ದೇವೆ ಎಂದರು.