ನವದೆಹಲಿ : ರಾಷ್ಟ್ರೀಯ ಸ್ವಯಂ ಸೇವಕ ಸಂಘ(ಆರ್.ಎಸ್.ಎಸ್)ಪ್ರಧಾನ ಕಾರ್ಯದರ್ಶಿ ಹುದ್ದೆಗೆ ಕೃಷ್ಣ ಗೋಪಾಲ್ ಅವರನ್ನು ನೇಮಕ ಮಾಡಲಾಗಿದೆ.
ಈ ಹಿಂದಿನ ಸಮನ್ವಯಕಾರರಾಗಿದ್ದ ಸುರೇಶ್ ಸೋನಿ, ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಶಾ ತಂಡದಲ್ಲಿ ಸ್ಥಾನ ಪಡೆಯುವ ಸಾಧ್ಯತೆಗಳಿರುವುದರಿಂದ ನೂತನ ಸಮನ್ವಯಕಾರ(ಕಾರ್ಯದರ್ಶಿ)ಯನ್ನು ನೇಮಕ ಮಾಡಲಾಗಿದೆ.
ಲಖನೌದಲ್ಲಿ ಮಂಗಳವಾರ ಆರಂಭವಾಗಲಿರುವ ಸಂಘದ ಅಖಿಲ ಭಾರತೀಯ ಕಾರ್ಯಕಾರಿ ಮಂಡಳಿ ಸಭೆಯ ಮೊದಲೇ ನಿರೀಕ್ಷಿತ ಸುದ್ದಿ ಹೊರಬಿದ್ದಿದೆ. ಈ ಸಭೆಯಲ್ಲಿ ಕೃಷ್ಣ ಗೋಪಾಲ್ ಅವರ ಆಯ್ಕೆಯನ್ನು ಅಧಿಕೃತವಾಗಿ ಪ್ರಕಟಿಸುವ ಸಾಧ್ಯತೆ ಇದೆ.
ಬಿಜೆಪಿ-ಆರ್.ಎಸ್.ಎಸ್ ನಡುವೆ ಸಮನ್ವಯಕಾರರಾಗಿ ಕಾರ್ಯನಿರ್ವಹಿಸುವ ಮಹತ್ವದ ಜವಾಬ್ದಾರಿ ಹೊರಲಿರುವ ಗೋಪಾಲ್ ಅವರು ಇತ್ತೀಚಿನ ಲೋಕಸಭೆ ಚುನಾವಣೆಯಲ್ಲಿ ಉತ್ತರಪ್ರದೇಶ, ಬಿಹಾರ ಮತ್ತು ಉತ್ತರಾಖಂಡದಲ್ಲಿ ಬಿಜೆಪಿ ಮತ್ತು ಅಮಿತ್ ಶಾ ಜತೆಗೂಡಿ ಶ್ರಮಿಸಿದ್ದರು.
ನರೇಂದ್ರ ಮೋದಿ ಅವರನ್ನು ಪ್ರಧಾನಿ ಅಭ್ಯರ್ಥಿಯನ್ನಾಗಿ ಮಾಡುವುದರಲ್ಲಿ ಮಹತ್ವದ ಪಾತ್ರ ವಹಿಸಿದ್ದ ಸುರೇಶ್ ಸೋನಿ ಅವರಿಗೆ ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಶಾ ಅವರ ತಂಡದಲ್ಲಿ ಪ್ರಮುಖ ಜವಾಬ್ದಾರಿ ನೀಡುವ ಸಾಧ್ಯತೆಗಳಿವೆ.