ಶ್ರೀನಗರ : ಜಮ್ಮು-ಕಾಶ್ಮೀರದ ಗಡಿಯಲ್ಲಿ ಪಾಕಿಸ್ತಾನ ಮತ್ತೆ ಪುಂಡಾಟಿಕೆ ಮುಂದುವರೆಸಿದ್ದು, ಅಂತರಾಷ್ಟ್ರೀಯ ಗಡಿ ನಿಯಂತ್ರಣ ರೇಖೆ ಬಳಿ ಪಾಕ್ ಸೇನೆ ಅಪ್ರಚೋದಿತ ಗುಂಡಿನ ದಾಳಿ ನಡೆಸಿದೆ.
ಜಮ್ಮು-ಕಾಶ್ಮೀರದ ಅರ್ನಿಯಾ ಸೆಕ್ಟರ್ ಬಳಿ ಪಾಕ್ ಸೇನೆ ಭಾರತೀಯ ಸೇನಾ ಶಿಬಿರಗಳನ್ನು ಗುರಿಯಾಗಿಸಿಕೊಂಡು ಭಾರೀ ಗುಂಡಿನ ದಾಳಿ ನಡೆಸಿದೆ. ಇದಕ್ಕೆ ಪ್ರತಿಯಾಗಿ ಭಾರತೀಯ ಯೋಧರು ಕೂಡ ಪ್ರತಿದಾಳಿ ನಡೆಸಿದ್ದಾರೆ ಎಂದು ತಿಳಿದುಬಂದಿದೆ.
ಅ.11ರ ರಾತ್ರಿಯಿಂದಲೂ ಪಾಕ್ ಸೇನೆ ಗುಂಡಿನ ದಾಳಿ ನಡೆಸುತ್ತಿದೆ. ಮುಂಜಾನೆಯಿಂದ ಆರ್.ಎಸ್.ಪುರ, ಅರ್ನಿಯಾ ಸೆಕ್ಟರ್ ಗಳಲ್ಲಿ 15 ಭಾರತೀಯ ಸೇನಾ ಶಿಬಿರಗಳ ಮೇಲೆ ನಿರಂತರ ದಾಳಿ ನಡೆಸುತ್ತಿದೆ. ಬಿಎಸ್ ಎಫ್ ಯೋಧರೂ ಪ್ರತಿ ದಾಳಿ ನಡೆಸುತ್ತಿದ್ದು, ಉಭಯ ಸೈನಿಕರ ನಡುವೆ ಗುಂಡಿನ ಚಕಮಕಿ ಮುಂದುವರೆದಿರುವುದರಿಂದ ಉದ್ವಿಗ್ನ ಪರಿಸ್ಥಿತಿ ನಿರ್ಮಾಣವಾಗಿದೆ.
ಭಾರತದ ಖಡಕ್ ಎಚ್ಚರಿಕೆ ಬಳಿಕ 41 ಗಂಟೆಗಳ ವರೆಗೆ ಸುಮ್ಮನಿದ್ದ ಪಾಕಿಸ್ತಾನ, ಅ.11ರ ಸಂಜೆಯಿಂದ ಮತ್ತೆ ತನ್ನ ಕ್ಯಾತೆ ಮುಂದುವರೆಸಿದೆ. ಶನಿವಾರ ಜಮ್ಮು-ಕಾಶ್ಮೀರದ ಪೂಂಚ್ ನ ಕೆರ್ನಿ ಸೆಕ್ಟರ್ ನ ನಾಲ್ಕು ಸೇನಾ ಶಿಬಿರಗಳ ಮೇಲೆ ಪಾಕ್ ಸೈನಿಕರು ಗುಂಡಿನ ದಾಳಿ ನಡೆಸಿದ್ದರು.