ನವದೆಹಲಿ : ಭಾರತದ ಗಡಿ ರಕ್ಷಣಾ ಪಡೆಯನ್ನು ಗುರಿಯಾಗಿರಿಸಿಕೊಂಡು ಪಾಕಿಸ್ತಾನ, ನಡೆಸುತ್ತಿರುವ ದಾಳಿ ಬಗ್ಗೆ ಪ್ರತಿಕ್ರಿಯಿಸಿರುವ ಗೃಹ ಸಚಿವ ರಾಜನಾಥ್ ಸಿಂಗ್ ಆಂತರಿಕ ಭದ್ರತೆ ವಿಷಯವಾಗಿ ರಾಜಿ ಮಾಡಿಕೊಳ್ಳುವುದಿಲ್ಲ ಎಂದು ಹೇಳಿದ್ದಾರೆ.
ಪಾಕಿಸ್ತಾನ ನಡೆಸುತ್ತಿರುವ ದಾಳಿ ಹಿನ್ನೆಲೆಯಲ್ಲಿ ಜ.5ರಂದು ಗುಪ್ತಚರ ಇಲಾಖೆಯ ಉನ್ನತ ಮಟ್ಟದ ಅಧಿಕಾರಿಗಳ ಸಭೆ ನಡೆಸಿದ ರಾಜನಾಥ್ ಸಿಂಗ್, ಪಾಕ್ ದಾಳಿಗೆ ತಕ್ಕ ಪ್ರತ್ಯುತ್ತರ ನೀಡುವಂತೆ ಸೂಚಿಸಿದ್ದಾರೆ.
ಕದನ ವಿರಾಮ ಉಲ್ಲಂಘಿಸಿ, ಅಪ್ರಚೋದಿತ ಗುಂಡಿನ ದಾಳಿಯನ್ನು ಮತ್ತಷ್ಟು ತೀವ್ರಗೊಳಿಸಿರುವ ಪಾಕಿಸ್ತಾನ, ಬಿ.ಎಸ್.ಎಫ್ ನ 10 ಶಿಬಿರಗಳ ಮೇಲೆ ದಾಳಿ ನಡೆಸಿದೆ.
ಜಮ್ಮು ಮತ್ತು ಕಾಶ್ಮೀರದ ಕತುವಾ ಮತ್ತು ಸಾಂಬಾ ಜಿಲ್ಲೆಯ 10 ಬಿ.ಎಸ್.ಎಫ್ ಶಿಬಿರಗಳ ಮೇಲೆ ಪಾಕ್ ಸೇನಾ ಪಡೆಗಳು ನಿರಂತರ ಗುಂಡಿನ ದಾಳಿ ನಡೆಸುತ್ತಿವೆ ಎಂದು ಕತುವಾ ಉಪ ಪೋಲಿಸ್ ಆಯುಕ್ತ ಶಾಹಿದ್ ಇಕ್ಬಾಲ್ ಚೌಧರಿ ಅವರು ಹೇಳಿದ್ದಾರೆ.
ಸಾಂಬಾ ಜಿಲ್ಲೆಯಲ್ಲೂ ಭಾರತೀಯ ಸೇನಾ ಶಿಬಿರಗಳ ಮೇಲೆ ಪಾಕ್ ಸೇನಾಪಡೆಗಳು ಎರಡು ಸುತ್ತಿನ ಗುಂಡಿನ ದಾಳಿ ನಡೆಸಿವೆ ಎಂದು ಸಾಂಬಾ ಎಸ್.ಎಸ್.ಪಿ ಅನಿಲ್ ಮಗೋತ್ರಾ ತಿಳಿಸಿದ್ದಾರೆ. ಈ ಮಧ್ಯೆ, ಪದೆಪದೇ ಪಾಕಿಸ್ತಾನದ ಕದನ ವಿರಾಮ ಉಲ್ಲಂಘಿಸುತ್ತಿರುವ ಹಿನ್ನೆಲೆಯಲ್ಲಿ ಗಡಿ ಪ್ರದೇಶದ ಗ್ರಾಮಗಳ ನಿವಾಸಿಗಳನ್ನು ಸುರಕ್ಷಿತ ಪ್ರದೇಶಗಳಿಗೆ ಸ್ಥಳಾಂತರಿಸಲಾಗುತ್ತಿದೆ. ಇತ್ತೀಚಿನ ವರದಿ ಪ್ರಕಾರ, ಜಮ್ಮು-ಕಾಶ್ಮೀರದಲ್ಲಿ ಪಾಕ್ ನಡೆಸುತ್ತಿರುವ ದಾಳಿಗೆ ಓರ್ವ ಭಾರತೀಯ ಯೋಧ ಹುತಾತ್ಮನಾಗಿದ್ದಾರೆ.