ನವದೆಹಲಿ : 'ವಿಜ್ಞಾನಿ'ಗಳ ನಿವೃತ್ತಿ ವಯಸ್ಸನ್ನು ಏರಿಕೆ ಮಾಡಲು ಕೇಂದ್ರ ಸರ್ಕಾರ ಚಿಂತನೆ ನಡೆಸಿದೆ ಎಂದು ಕೇಂದ್ರ ಸಚಿವ ಜಿತೇಂದ್ರ ಸಿಂಗ್ ತಿಳಿಸಿದ್ದಾರೆ.
ವಿಜ್ಞಾನಿಗಳ ನಿವೃತ್ತಿ ವಯೋಮಿತಿ ಏರಿಕೆ ತಮ್ಮ ವ್ಯಾಪ್ತಿಗೆ ಬರುವ ಇಲಾಖೆಗಳಿಗೆ ಮಾತ್ರ ಸೀಮಿತವಾಗಿರಲಿದೆ ಎಂದು ವಿಜ್ಞಾನ,ತಂತ್ರಜ್ಞಾನ, ಭೂ ವಿಜ್ಞಾನ, ಅಣುಶಕ್ತಿ ಮತ್ತು ಸ್ಪೇಸ್ ಖಾತೆಗಳ ಸಚಿವ ಜಿತೇಂದ್ರ ಸಿಂಗ್ ಸ್ಪಷ್ಟಪಡಿಸಿದ್ದಾರೆ.
ಕೇಂದ್ರ ಸರ್ಕಾರ ವಿಜ್ಞಾನಿಗಳ ನಿವೃತ್ತಿ ವಯಸ್ಸನ್ನು 60ರಿಂದ 62ಕ್ಕೆ ಏರಿಕೆ ಮಾಡಲು ಗಂಭೀರವಾಗಿ ಚಿಂತನೆ ನಡೆಸಿದೆ. ವಿಜ್ಞಾನಿಗಳು ಮಾಡುವ ಸಾಧನೆಗಳಿಗೆ ಮತ್ತೆರಡು ವರ್ಷಗಳ ಹೆಚ್ಚುವರಿ ಕಾಲಾವಕಾಶ ನೀಡಬೇಕು, ಈ ಪ್ರಸ್ತಾವನೆಯ ಕಾರ್ಯಸಾಧ್ಯತೆಯನ್ನು ನಾವು ಗಂಭೀರವಾಗಿ ಪರಿಗಣಿಸಿದ್ದೇವೆ ಎಂದು ಜಿತೇಂದ್ರ ಸಿಂಗ್ ಹೇಳಿದ್ದಾರೆ.
ವಿಜ್ಞಾನಿಗಳ ನಿವೃತ್ತಿ ವಯಸ್ಸನ್ನು ಏರಿಕೆ ಮಾಡುವ ಪ್ರಸ್ತಾವನೆಗೆ ಹಲವು ಸಚಿವಾಲಯಗಳಿಂದ ಒಪ್ಪಿಗೆ ಪಡೆದುಕೊಳ್ಳಬೇಕಾಗುತ್ತದೆ. ಪ್ರಸ್ತುತ ಕೇಂದ್ರ ಸರ್ಕಾರದ ನೌಕರರ ನಿವೃತ್ತಿಯ ವಯಸ್ಸನ್ನು 60ಕ್ಕೆ ನಿಗದಿ ಪಡಿಸಲಾಗಿದೆ.
ಅಂತೆಯೇ ಹಲವು ಸಚಿವಾಲಯಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ವಿಜ್ಞಾನಿಗಳೂ 60 ವರ್ಷಕ್ಕೆ ನಿವೃತ್ತರಾಗಲಿದ್ದಾರೆ. ಆದರೆ ಕೆಲವರ ಅನುಭವ ಮತ್ತು ಪರಿಣತಿಯನ್ನು ಗುರುತಿಸಿ ಸರ್ಕಾರ ನಿವೃತ್ತಿಯ ನಂತರವೂ ಕೆಲಸ ಮುಂದುವರೆಸಲು ಅವಕಾಶ ನೀಡಿದೆ.