ಕೋಲ್ಕತ್ತಾ : ಬುರ್ದ್ವಾನ್ ನ ಟಿ.ಎಂ.ಸಿ ನಾಯಕನ ಮನೆಯಲ್ಲಿ ಸಂಭವಿಸಿದ ಬಾಂಬ್ ಸ್ಫೋಟ ಪ್ರಕರಣ ಹೊಸ ತಿರುವು ಪಡೆದುಕೊಂಡಿದ್ದು, ಕೃತ್ಯದ ಹಿಂದೆ ಅಲ್ ಖೈದಾ ಉಗ್ರನ ಕೈವಾಡವಿರುವ ಬಗ್ಗೆ ಅನುಮಾನ ವ್ಯಕ್ತವಾಗಿದೆ.
ಸ್ಫೋಟದಲ್ಲಿ ಮೃತಪಟ್ಟ ಇಬ್ಬರು ಇಂಡಿಯನ್ ಮುಜಾಹಿದ್ದೀನ್ ಸಂಘಟನೆಯ ಶಂಕಿತ ಉಗ್ರರ ಪತ್ನಿಯರನ್ನು ರಾಷ್ಟ್ರೀಯ ತನಿಖಾದಳ ತನಿಖೆಗೆ ಒಳಪಡಿಸಿದ ಬೆನ್ನಲ್ಲೇ ಅಲ್ ಖೈದಾ ಅವಳಿ ಸಂಘಟನೆ ಅಲ್ ಜಿಹಾದ್ ಉಗ್ರರ ಕೈವಾಡವಿರುವ ಅನುಮಾನ ವ್ಯಕ್ತವಾಗಿದೆ.
ಇದೇ ವೇಳೆ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ವಿರುದ್ಧ ವಾಗ್ದಾಳಿ ನಡೆಸಿರುವ ಬಿಜೆಪಿ, ಮಮತಾ ವ್ಯಾನರ್ಜಿ ಅಧಿಕಾರಾವಧಿಯಲ್ಲಿ ಪಶ್ಚಿಮ ಬಂಗಾಳ ಉಗ್ರರಿಗೆ ಸ್ವರ್ಗದಂತಾಗಿದೆ ಎಂದು ವಾಗ್ದಾಳಿ ನಡೆಸಿದೆ.
ಘಟನೆ ಬಗ್ಗೆ ಪ್ರತಿಕ್ರಿಯಿಸಿರುವ ಬಿಜೆಪಿ ಮುಖಂಡ ಸಿದ್ಧಾರ್ಥನಾಥ್ ಸಿಂಗ್, ಟಿಎಂಸಿ ಆಡಳಿತದಲ್ಲಿ ಪಶ್ಚಿಮ ಬಂಗಾಳ ಜಿಹಾದಿ ರಾಜ್ಯವಾಗಿ ಪರಿವರ್ತನೆಯಾಗುತ್ತಿದೆ ಎಂದು ಆರೋಪಿಸಿದ್ದಾರೆ. ಟಿಎಂಸಿ ನಾಯಕರೇ ಬಾಂಬ್ ತಯಾರಿಸುವಂತಹ ಕೃತ್ಯಗಳಲ್ಲಿ ತೊಡಗಿದ್ದಾರೆ. ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳುವಲ್ಲಿ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ವಿಫಲರಾಗಿದ್ದಾರೆ ಎಂದು ಆರೋಪಿಸಿದ್ದಾರೆ.