ಕೋಲ್ಕತ್ತಾ : ತೃಣಮೂಲ ಕಾಂಗ್ರೆಸ್ ಮುಖ್ಯಸ್ಥೆ ಮಮತಾ ಬ್ಯಾನರ್ಜಿ ಸತತ ಎರಡನೇ ಅವಧಿಗೆ ಪಶ್ಚಿಮ ಬಂಗಾಳದ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದ್ದಾರೆ.
ರಾಜಭವನದ ಬದಲಾಗಿ ಕೋಲ್ಕತದ ರೆಡ್ ರೋಡ್ನಲ್ಲಿ ಏರ್ಪಡಿಸಲಾದ ಬಹಿರಂಗ ಸಮಾರಂಭದಲ್ಲಿ ರಾಜ್ಯಪಾಲ ಕೇಸರಿನಾಥ್ ತ್ರಿಪಾಠಿ, ಮಮತಾ ಬ್ಯಾನರ್ಜಿಯವರಿಗೆ ಪ್ರಮಾಣ ವಚನ ಭೋದಿಸಿದರು. 20,000ಕ್ಕೂ ಹೆಚ್ಚು ಜನರು ಸಮಾರಂಭದಲ್ಲಿ ಭಾಗವಹಿಸಿದ್ದರು.
ರಾಜಭವನದ ಹೊರಗೆ ಸರ್ಕಾರದ ಪ್ರಮಾಣ ವಚನ ನಡೆದದ್ದು ಪಶ್ಚಿಮ ಬಂಗಾಳದ ಇತಿಹಾಸದಲ್ಲೇ ಮೊದಲು. ಮಮತಾ ಜತೆ ಸಚಿವ ಸಂಪುಟದ ಸದಸ್ಯರೂ ಪ್ರಮಾಣ ವಚನ ಸ್ವೀಕರಿಸಿದರು.
ಸಮಾರಂಭದಲ್ಲಿ ಸುಮಾರು 5000 ಮಂದಿ ವಿಶೇಷ ಆಹ್ವಾನಿತ ಗಣ್ಯರೂ ಪಾಲ್ಗೊಂಡಿದ್ದರು. ಭೂತಾನ್ ಪ್ರಧಾನಿ ಟ್ಸೆರಿಂಗ್ ತೊಬ್ಗೇ, ಬಾಂಗ್ಲಾದೇಶದ ಕೈಗಾರಿಕಾ ಸಚಿವರು, ಕೇಂದ್ರ ವಿತ್ತ ಸಚಿವ ಅರುಣ್ ಜೇಟ್ಲಿ, ಉತ್ತರ ಪ್ರದೇಶದ ಮುಖ್ಯಮಂತ್ರಿ ಅಖಿಲೇಶ್ ಯಾದವ್, ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್, ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಅವರಲ್ಲದೆ ಕ್ರೀಡಾ ಕ್ಷೇತ್ರ, ಬಾಲಿವುಡ್ ನಟ, ನಟಿಯರು ಪಾಲ್ಗೊಂಡಿದ್ದರು.