ವಾಷಿಂಗ್ಟನ್ : 5 ದಿನಗಳ ಅಮೆರಿಕಾ ಪ್ರವಾಸ ಕೈಗೊಂಡಿರುವ ಪ್ರಧಾನಿ ನರೇಂದ್ರ ಮೋದಿಯವರಿಗೆ ಅಮೆರಿಕ ಅಧ್ಯಕ್ಷ ಬರಾಕ್ ಒಬಾಮ ಖಾಸಗಿ ಔತಣಕೂಟ ಆಯೋಜಿಸಿದ್ದಾರೆ.
ಸೆ.29ರಂದು ಸಂಜೆ ಅಂದರೆ ಭಾರತೀಯ ಕಾಲಮಾನದ ಪ್ರಕಾರ ಸೆ.30ರಂದು ನಸುಕಿನಜಾವ ಔತಣಕೂಟ ಆಯೋಜಿಸಿದ್ದು, ಈ ವೇಳೆ ಉಭಯ ನಾಯಕರು ಲೋಕಾಭಿರಾಮವಾಗಿ ಮಾತುಕತೆ ನಡೆಸಲಿದ್ದಾರೆ.
ಸೆ.30ರಂದು ಪ್ರಧಾನಿ ಮೋದಿಯವರ ಅಮೆರಿಕ ಪ್ರವಾಸ ಮುಗಿಯಲಿದ್ದು, ಅಂದು ಮೋದಿ ಹಾಗೂ ಒಬಾಮ ಅವರ ನಡುವೆ ಮಹತ್ವದ ದ್ವಿಪಕ್ಷೀಯ ಮಾತುಕತೆ ನಿಗದಿಯಾಗಿದೆ.
ಭಾರತದ ರಕ್ಷಣಾ ಹಾಗೂ ವೈಮಾನಿಕ ವಲಯಕ್ಕೆ ಬೇಕಾದ ಸಾಮಗ್ರಿ ಪೂರೈಕೆ ಸಂಬಂಧ 18 ಸಾವಿರ ಕೋಟಿ ರೂ. ನಿಂದ 30 ಸಾವಿರ ಕೋಟಿ ರೂ ವರೆಗಿನ ಒಪ್ಪಂದ ಮಾಡಿಕೊಳ್ಳಲು ಅಮೆರಿಕದ ಅರ್ಧ ಡಜನ್ ಕಂಪನಿಗಳು ಆಸಕ್ತಿ ವ್ಯಕ್ತಪಡಿಸಿವೆ. ಮೋದಿಯವರ ಕನಸಿನ ಸ್ಮಾರ್ಟ್ ಸಿಟಿ ಹಾಗೂ ಡಿಜಿಟಲ್ ಇಂಡಿಯಾ ಯೋಜನೆಯಲ್ಲೂ ಪಾಲುದಾರರಾಗಲು ಉತ್ಸುಕವಾಗಿವೆ ಎಂದು ಹೇಳಲಾಗುತ್ತಿದೆ.
ಸಂಜೆ ಪ್ರಧಾನಿ ಮೋದಿ ವಾಷಿಂಗ್ಟನ್ ಗೆ ಆಗಮಿಸಲಿದ್ದು, ಈ ವೇಳೆ ವ್ಯಾಪಾರ ಒಪ್ಪಂದ ಕುರಿತು ಚರ್ಚೆ ನಡೆಸುವ ಸಾಧ್ಯತೆಯಿದೆ. ಬೋಯಿಂಗ್, ಲಾಕ್ ಹೀಡ್ ಮಾರ್ಟಿನ್, ಜನರಲ್ ಎಲೆಕ್ಟ್ರಿಕ್ ಹಾಗೂ ರೇಥಿಯಾನ್ ಕಂಪನಿಗಳು ರಕ್ಷಣೆ-ವೈಮಾನಿಕ ಕ್ಷೇತ್ರದ ಒಪ್ಪಂದಾಕ್ಕಾಗಿ ಕಾದಿವೆ ಎಂದು ಮೂಲಗಳು ತಿಳಿಸಿವೆ.