ಬೆಂಗಳೂರು : ಜನರೊಂದಿಗೆ ನಾನು ನೇರ ಸಂಪರ್ಕ ಇಟ್ಟುಕೊಂಡಿದ್ದೇನೆ, ಆದರೆ ಕಾಲ ಬದಲಾಗಿದ್ದು ಯುವಜನತೆ ಸಾಮಾಜಿಕ ಜಾಲತಾಣಗಳಲ್ಲಿ ಹೆಚ್ಚು ಸಕ್ರಿಯರಾಗಿರುವುದರಿಂದ ನಾನು ಸಾಮಾಜಿಕ ಜಾಲತಾಣಕ್ಕೆ ಬಂದಿದ್ದೇನೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ.
ಸೆ.22ರಂದು ಸಾಮಾಜಿಕ ಜಾಲತಾಣ ಖಾತೆಗೆ ಚಾಲನೆ ನೀಡಿದ ನಂತರ ಮಾತನಾಡಿದ ಸಿದ್ದರಾಮಯ್ಯ, ಇನ್ನು ಮುಂದೆ, ಕನ್ನಡ, ಇಂಗ್ಲೀಷ್ ನಲ್ಲಿ ಟ್ವೀಟ್ ಮಾಡುವುದಾಗಿ ತಿಳಿಸಿದ್ದಾರೆ. ಯಾವುದೇ ವಿಷಯವಾದರೂ ಅಧಿಕಾರಿಗಳು ನನ್ನ ಅಭಿಪ್ರಾಯ ಪಡೆದು ಟ್ವೀಟ್ ಮಾಡಲಿದ್ದಾರೆ ಎಂದಿರುವ ಸಿದ್ದರಾಮಯ್ಯ, ತಮ್ಮ ದಿನಚರಿ, ಜನತಾ ದರ್ಶನ, ಫೋಟೋಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಅಪ್ ಡೇಟ್ ಮಾಡುವುದಾಗಿ ತಿಳಿಸಿದ್ದಾರೆ.
ಸಾಮಾಜಿಕ ಜಾಲತಾಣದಲ್ಲಿ ಸಕ್ರಿಯವಾಗಬೇಕೆಂದು ಬಹಳ ದಿನಗಳಿಂದ ಸ್ನೇಹಿತರಿಂದ ಒತ್ತಡವಿತ್ತು. ಇದಕ್ಕಾಗಿ ಅವರು ಹೋರಾಟ ಮಾಡಿದ್ದಾರೆ. ಅಲ್ಲದೇ 35 ವರ್ಷದವರು ಶೇ.65ರಷ್ಟಿರುವುದರಿಂದ ಯುವಜನತೆಯೊಂದಿಗೆ ನಿರಂತರ ಸಂಪರ್ಕದಲ್ಲಿರಲು ಫೇಸ್ ಬುಕ್, ಟ್ವಿಟರ್, ಯೂಟ್ಯೂಬ್ ಖಾತೆಗೆ ಚಾಲನೆ ನೀಡಿರುವುದಾಗಿ ಸಿದ್ದರಾಮಯ್ಯ ತಿಳಿಸಿದ್ದಾರೆ.