ಬೆಂಗಳೂರು : ಕೆ.ಎಂ.ಎಫ್ (ಕರ್ನಾಟಕ ಹಾಲು ಮಹಾಮಂಡಳ) ಅಧ್ಯಕ್ಷರ ನೇಮಕಾತಿ ವಿಚಾರಕ್ಕೆ ಸಂಬಂಧಿಸಿದಂತೆ ಕಾಂಗ್ರೆಸ್ ನಾಯಕರಲ್ಲೇ ಅಪಸ್ವರ ವ್ಯಕ್ತವಾಗಿದೆ.
ಹರಪನಹಳ್ಳಿ ಕಾಂಗ್ರೆಸ್ ಶಾಸಕರೂ ಆಗಿರುವ ಎಂ.ಪಿ.ರವೀಂದ್ರ ಅವರನ್ನು ಕೆ.ಎಂ.ಎಫ್ ಅಧ್ಯಕ್ಷರನ್ನಾಗಿ ನೇಮಕ ಮಾಡುವ ಬಗ್ಗೆ ನಿರ್ಧಾರ ಕೈಗೊಳ್ಳಲಾಗಿತ್ತು. ಆದರೆ ಇಂಧನ ಸಚಿವ ಡಿ.ಕೆ.ಶಿವಕುಮಾರ್, ಪಿ.ನಾಗರಾಜ್ ಅವರನ್ನು ಅಧಕ್ಷರನ್ನಾಗಿ ನೇಮಕ ಮಾಡಬೇಕು ಎಂದು ಪಟ್ಟು ಹಿಡಿದಿದ್ದಾರೆ.
ಈ ಸಂಬಂಧ ಡಿ.ಕೆ.ಶಿವಕುಮಾರ್, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಭೇಟಿಯಾಗಿದ್ದು, ಪಿ.ನಾಗರಾಜ್ ಅವರಿಗೆ ಕೆ.ಎಂ.ಎಫ್ ಅಧ್ಯಕ್ಷ ಸ್ಥಾನಕ್ಕೆ ಅವಕಾಶ ನೀಡಬೇಕು ಎಂದು ಮನವಿ ಮಾಡಿದರು.
ಇದಕ್ಕೆ ಉತ್ತರಿಸಿದ ಮುಖ್ಯಮಂತ್ರಿ ಸಿದ್ದರಾಮಯ್ಯ, ಮೊದಲ ಅವಧಿಗೆ ಎಂ.ಪಿ.ರವೀಂದ್ರ ಅವರು ಕೆ.ಎಂ.ಎಫ್ ಅಧ್ಯಕ್ಷಗಿರಿ ವಹಿಸಿಕೊಳ್ಳಲಿ, ಎರಡನೇ ಅವಧಿಗೆ ಪಿ.ನಾಗರಾಜ್ ಅಧ್ಯಕ್ಷರನ್ನಾಗಿ ನೇಮಕ ಮಾಡೋಣ ಎಂದು ತಿಳಿಸಿದ್ದಾರೆ.
ಸೆ.15ರಂದು ಸಚಿವ ಮಹದೇವ್ ಪ್ರಸಾದ್ ನಿವಾಸದಲ್ಲಿ ಕೆ.ಎಂ.ಎಫ್ ಅಧ್ಯಕ್ಷರ ನೇಮಕಾತಿ ಸಂಬಂಧ ಸಭೆ ನಡೆದಿದ್ದು, ಸಭೆಯಲ್ಲಿ ರವೀಂದ್ರ ಅವರನ್ನು ಅಧ್ಯಕ್ಷರನ್ನಾಗಿ ನೇಮಕ ಮಾಡುವ ಬಗ್ಗೆ ನಿರ್ಧಾರ ಕೈಗೊಳ್ಳಲಾಗಿತ್ತು.