ಲಖ್ನೌ : 'ಸಮಾಜವಾದಿ ಪಕ್ಷ'ದ ಮುಖಂಡ ಮುಲಾಯಂ ಸಿಂಗ್ ಯಾದವ್ ಪಾಕಿಸ್ತಾನಕ್ಕೆ ಹೋಗಿ ನೆಲೆಸಲಿ ಎಂದು ಬಿಜೆಪಿ ಸಂಸದ ಯೋಗಿ ಆದಿತ್ಯನಾಥ್ ಸಲಹೆ ನೀಡಿದ್ದಾರೆ.
ಉತ್ತರ ಪ್ರದೇಶದಲ್ಲಿ ಸಾರ್ವಜನಿಕ ಸಭೆಯನ್ನುದ್ದೇಶಿಸಿ ಮಾತನಾಡಿದ ಯೋಗಿ ಆದಿತ್ಯನಾಥ್, ಮುಲಾಯಂ ಸಿಂಗ್ ವಿರುದ್ಧ ವಾಗ್ದಾಳಿ ನಡೆಸಿದ್ದು, ಸಮಾಜವಾದಿ ಪಕ್ಷದ ಮುಖಂಡ ಮುಲಾಯಂ ಸಿಂಗ್ ಮುಸ್ಲಿಮರ ಓಲೈಕೆಯಲ್ಲಿ ನಿರತರಾಗಿದ್ದು ಅವರು ಪಾಕಿಸ್ತಾನದಲ್ಲಿ ಹುಟ್ಟಬೇಕಿತ್ತು ಎಂದು ಆದಿತ್ಯನಾಥ್ ಲೇವಡಿ ಮಾಡಿದ್ದಾರೆ.
ರಾಜ್ಯ ಸರ್ಕಾರ ಒಂದು ನಿರ್ದಿಷ್ಠ ಸಮುದಾಯದ ಓಲೈಕೆಯಲ್ಲಿ ನಿರತವಾಗಿದೆ. ಒಂದೇ ಸಮುದಾಯಕ್ಕೆ ಅನುದಾನ ನೀಡುವ ಬದಲು ರಾಜ್ಯದ ಜನತೆ ಎದುರಿಸುತ್ತಿರುವ ವಿದ್ಯುತ್ ಸಮಸ್ಯೆ ಪರಿಹಾರಕ್ಕೆ ಯತ್ನಿಸಬಹುದು ಎಂದು ಅದಿತ್ಯನಾಥ್ ಅಭಿಪ್ರಾಯಪಟ್ಟಿದ್ದಾರೆ.
ಇದೇ ವೇಳೆ ಉತ್ತರ ಪ್ರದೇಶ ಸರ್ಕಾರ 'ರಾಮ ಧ್ರೋಹಿ'ಯಂತೆ ವರ್ತಿಸುತ್ತಿದೆ ಎಂದು ಯೋಗಿ ಆದಿತ್ಯನಾಥ್ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಅಖಿಲೇಶ್ ಯಾದವ್ ನೇತೃತ್ವದ ಸರ್ಕಾರದ ಧೋರಣೆಗಳನ್ನು ಸಹಿಸುವುದಿಲ್ಲ ಎಂದು ಇದೇ ವೇಳೆ ಎಚ್ಚರಿಸಿದ್ದಾರೆ.