ನವದೆಹಲಿ : ಭಾರತ ಪ್ರವಾಸ ಕೈಗೊಂಡಿರುವ ಜರ್ಮನ್ ನ ವಿದಶಾಂಗ ಸಚಿವ ಫ್ರಾಂಕ್ ವಾಲ್ಟರ್ ಸ್ಟೇನ್ ಮೀಯರ್ ಸೆ.8ರಂದು ಪ್ರಧಾನಿ ನರೇಂದ್ರ ಮೋದಿ, ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ ಅವರನ್ನು ಭೇಟಿ ಮಾಡಿ ಚರ್ಚಿಸಿದ್ದಾರೆ.
ವ್ಯಾಪಾರ, ಹೂಡಿಕೆ, ಹೈಟೆಕ್ ಸಹಕಾರ ಮತ್ತು ಭಾರತ-ಜರ್ಮನ್ ಸಹಯೋಗದೊಂದಿಗೆ ನವೀಕರಿಸಬಹುದಾದ ಶಕ್ತಿ ಸೇರಿದಂತೆ ಹಲವು ವಿಷಯಗಳ ಬಗ್ಗೆ ಚರ್ಚೆ ನಡೆದಿದೆ ಎಂದು ವಿದೇಶಾಂಗ ಇಲಾಖೆ ವಕ್ತಾರ ಸಯ್ಯದ್ ಅಕ್ಬರುದ್ದೀನ್ ತಿಳಿಸಿದ್ದಾರೆ.
ಉನ್ನತ ಮಟ್ಟದ ವ್ಯಾಪಾರ ನಿಯೋಗದೊಂದಿಗೆ ಭಾರತಕ್ಕೆ ಅಗಮಿಸಿರುವ ಫ್ರಾಂಕ್ ವಾಲ್ಟರ್ ಸ್ಟೇನ್ ಮೀಯರ್, ಮಾನವ ಸಂಪನ್ಮೂಲ ಇಲಾಖೆ ಸಚಿವೆ ಸ್ಮೃತಿ ಇರಾನಿ, ನಗರಾಭಿವೃದ್ಧಿ ಸಚಿವ ವೆಂಕಯ್ಯ ನಾಯ್ಡು, ವಾಣಿಜ್ಯ ಇಲಾಖೆ ಸಚಿವೆ ನಿರ್ಮಲಾ ಸೀತಾರಾಮನ್ ಅವರನ್ನೂ ಭೇಟಿ ಮಾಡಲಿದ್ದಾರೆ.
ಫ್ರಾಂಕ್ ವಾಲ್ಟರ್ ಸ್ಟೇನ್ ಮೀಯರ್ ಶನಿವಾರದಿಂದ ಭಾರತ ಪ್ರವಾಸದಲ್ಲಿದ್ದಾರೆ. ಕೇಂದ್ರದಲ್ಲಿ ನರೇಂದ್ರ ಮೋದಿ ನೇತೃತ್ವದ ಎನ್.ಡಿ.ಎ ಸರ್ಕಾರ ರಕ್ಷಣಾ ಕ್ಷೇತ್ರ ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ವಿದೇಶಿ ನೇರ ಬಂಡವಾಳ ಹೂಡಿಕೆ ಅವಕಾಶವನ್ನು ಹೆಚ್ಚಿಸಿರುವುದರ ಹಿನ್ನೆಲೆಯಲ್ಲಿ ವಿದೇಶದ ಸಚಿವರು ಪ್ರಧಾನಿ ಮೋದಿ ಅವರನ್ನು ಸಾಲು ಸಾಲಾಗಿ ಭೇಟಿ ಮಾಡುತ್ತಿದ್ದಾರೆ.