ನವದೆಹಲಿ : 'ಭಾರತ' ಹಾಗೂ ಆಸ್ಟ್ರೇಲಿಯಾ ನಡುವೆ ಯುರೇನಿಯಂ ರಫ್ತು ಒಪ್ಪಂದ ನಡೆಯುವುದು ಬಹುತೇಕ ಖಚಿತಗೊಂಡಿದೆ. ಸೆ.5ರ ಸಂಜೆ ಪ್ರಧಾನಿ ನರೇಂದ್ರ ಮೋದಿ ಹಾಗೂ ಆಸ್ಟ್ರೇಲಿಯಾ ಪ್ರಧಾನಿ ಟೋನಿ ಅಬೋಟ್ ಯುರೇನಿಯಂ ರಫ್ತು ಒಪ್ಪಂದಕ್ಕೆ ಸಹಿ ಹಾಕಲಿದ್ದಾರೆ.
ಇಂದು ಸಂಜೆ ನಾನು ಹಾಗೂ ಪ್ರಧಾನಿ ನರೇಂದ್ರ ಮೋದಿ ಪರಮಾಣು ಸಹಕಾರ ಒಪ್ಪಂದಕ್ಕೆ ಸಹಿ ಹಾಕಲಿದ್ದೇವೆ ಎಂದು ಆಸ್ಟ್ರೇಲಿಯಾ ಪ್ರಧಾನಿ ಟೋನಿ ಅಬೋಟ್ ಟ್ವೀಟ್ ಮಾಡಿದ್ದಾರೆ. ನವದೆಹಲಿಗೆ ಆಗಮಿಸುತ್ತಿದ್ದಂತೆಯೇ ಟೋನಿ ಅಬೋಟ್ ವಿದೇಶಾಂಗ ಸಚಿವೆ ಸುಷ್ಮ ಸ್ವರಾಜ್ ಅವರನ್ನು ಭೇಟಿ ಮಾಡಿದ್ದಾರೆ.
ನಂತರ ರಾಜ್ ಘಾಟ್ ಗೆ ಭೇಟಿ ನೀಡಿ ಮಹಾತ್ಮಾ ಗಾಂಧಿ ಸಮಾಧಿಗೆ ತೆರಳಿ ರಾಷ್ಟ್ರಪಿತನಿಗೆ ನಮನ ಸಲ್ಲಿಸಿದ್ದಾರೆ. ಇದೇ ವೇಳೆ ಟ್ವೀಟ್ ಮಾಡಿರುವ ಪ್ರಧಾನಿ ನರೇಂದ್ರ ಮೋದಿ, ಟೋನಿ ಅಬೋಟ್ ಅವರ ಭಾರತ ಭೇಟಿ, ಭಾರತ-ಆಸ್ಟ್ರೇಲಿಯಾ ನಡುವಿನ ದ್ವಿಪಕ್ಷೀಯ ಸಂಬಂಧ ಮತ್ತಷ್ಟು ಉತ್ತಮಗೊಳ್ಳಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಭಾರತ ಆಸ್ಟ್ರೇಲಿಯಾ ಪರಮಾಣು ಸಹಕಾರ ಒಪ್ಪಂದಕ್ಕೆ ಸಹಿ ಹಾಕಿದರೆ ಭಾರತಕ್ಕೆ ಯುರೇನಿಯಂ ರಫ್ತು ಮಾಡಲು ಸಹಕಾರಿಯಾಗಲಿದೆ. ಯುರೇನಿಯಂ ರಫ್ತು ಒಪ್ಪಂದದಿಂದ ಭಾರತದಲ್ಲಿನ ವಿದ್ಯುತ್ ಬೇಡಿಕೆಯನ್ನು ಪೂರೈಸಲು ಸಾಹಯಕಾರಿಯಾಗಲಿದೆ.