ನವದೆಹಲಿ : ಶಿಕ್ಷಕರ ವೃತ್ತಿ ನೌಕರಿಯಲ್ಲ, ಅದು ಧರ್ಮವಿದ್ದಂತೆ ಎಂದು ಪ್ರಧಾನಿ ನರೇಂದ್ರ ಮೋದಿ ಅಭಿಪ್ರಾಯಪಟ್ಟಿದ್ದಾರೆ.
ಸೆ.5ರಂದು ನಡೆಯಲಿರುವ ಶಿಕ್ಷಕರ ದಿನಾಚರಣೆ ಅಂಗವಾಗಿ ಪ್ರಶಸ್ತಿ ಪಡೆಯಲಿರುವ 350 ಶಿಕ್ಷಕರೊಂದಿಗೆ ಪ್ರಧಾನಿ ನರೇಂದ್ರ ಮೋದಿ ನವದೆಹಲಿಯಲ್ಲಿ ಅನೌಪಚಾರಿಕ ಸಂವಾದ ನಡೆಸಿದರು.
ಈ ವೇಳೆ ಮಾತನಾಡಿದ ಅವರು, ಶಿಕ್ಷಕ ವೃತ್ತಿ ನೌಕರಿಯಲ್ಲ, ಧರ್ಮವಿದ್ದಂತೆ, ಶಿಕ್ಷಕ ವಿದ್ಯಾರ್ಥಿಗಳಿಗೆ ದಾರಿ ತೋರುವ ದೇವರಿದ್ದಂತೆ ಎಂದು ಅಭಿಪ್ರಾಯಪಟ್ಟರು.
ಜೀವನ ಪೂರ್ತಿ ಶಿಕ್ಷಕ ಶಿಕ್ಷಕನಾಗಿಯೇ ಇರುತ್ತಾನೆ. ನೌಕರಿ ಇರಲೀ, ಇಲ್ಲದಿರಲೀ ಶಿಕ್ಷಕ ಎಂದೂ ನಿವೃತ್ತಿಯಾಗುವುದಿಲ್ಲ, ಶಿಕ್ಷಕನ ಮನಸ್ಸು ಯಾವಾಗಲೂ ಕಲಿಸಲು ತುಡಿಯುತ್ತಿರುತ್ತದೆ. ಅವರು ಯಾವಾಗಲೂ ಸಮಯಕ್ಕಿಂತ ಎರಡು ಹೆಜ್ಜೆ ಮುಂದಿರುತ್ತಾರೆ ಎಂದರು.
ಪ್ರತಿಯೊಬ್ಬರ ಜೀವನದಲ್ಲೂ ಶಿಕ್ಷಕರ ಪಾತ್ರ ಮಹತ್ವದ್ದು, ನಾನೂ ಕೂಡ ಸರ್ಕಾರಿ ಶಾಲೆಯಲ್ಲಿ ಓದಿದ್ದೆ ಎಂದು ಮೋದಿ ತಮ್ಮ ಹಳೆಯ ನೆನಪುಗಳನ್ನು ಮೆಲುಕುಹಾಕಿದರು. ಸೆ.5ರಂದು 350 ಶಿಕ್ಷಕರಿಗೆ ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಪ್ರಶಸ್ತಿ ಪ್ರದಾನ ಮಾಡಲಿದ್ದಾರೆ.