ನವದೆಹಲಿ : ದೆಹಲಿ ಮುಖ್ಯಮಂತ್ರಿ ಹುದ್ದೆ ನೀಡುವುದಾಗಿ ಬಿಜೆಪಿ ತಮಗೆ ಆಮಿಷ ಒಡ್ಡಿತ್ತು ಎಂದು ಆಮ್ ಆದ್ಮಿ ಪಕ್ಷದ ನಾಯಕ ಕುಮಾರ್ ವಿಶ್ವಾಸ್ ಗಂಭೀರ ಆರೋಪ ಮಾಡಿದ್ದಾರೆ.
ದೆಹಲಿಯಲ್ಲಿ ಆಡಳಿತ ಬಿಕ್ಕಟ್ಟು ಇನ್ನೂ ಶಮನಗೊಂಡಿಲ್ಲ, ರಾಷ್ಟ್ರಪತಿ ಆಳ್ವಿಕೆ ಮುಂದುವರೆದಿದೆ ಈ ನಡುವೆ ದೆಹಲಿಯಲ್ಲಿ ಮಾತನಾಡಿದ ಆಪ್ ನಾಯಕ ಕುಮಾರ್ ವಿಶ್ವಾಸ್, ಆಮ್ ಆದ್ಮಿ ಪಕ್ಷವನ್ನು ಒಡೆಯಲು ಬಿಜೆಪಿ ತಂತ್ರ ರೂಪಿಸುತ್ತಿದೆ ಎಂದು ಆಪಾದಿಸಿದ್ದಾರೆ.
ಲೋಕಸಭಾ ಚುನಾವಣೆ ಫಲಿತಾಂಶ ಪ್ರಕಟಗೊಂಡು ಮೂರು ದಿನಗಳ ಬಳಿಕ ಬಿಜೆಪಿ ಸಂಸದರೊಬ್ಬರು ತಮ್ಮ ಮನೆಗೆ ಬಂದು, ಆಮ್ ಆದ್ಮಿ ಪಕ್ಷದ ಶಾಸಕರನ್ನು ಬಿಜೆಪಿಗೆ ಕರೆತಂದರೆ ನನಗೆ ದೆಹಲಿಯಲ್ಲಿ ಮುಖ್ಯಮಂತ್ರಿ ಸ್ಥಾನ ನೀಡುವುದಾಗಿ ಆಮಿಷ ಒಡ್ಡಿದ್ದರು. ಬಿಜೆಪಿ ಆಪ್ ಪಕ್ಷವನ್ನು ಒಡೆಯುವ ತಂತ್ರ ರೂಪಿಸಿದೆ ಎಂದು ಗುಡುಗಿದ್ದಾರೆ.
ಈ ಹಿಂದೆ ಆಪ್ ಮುಖ್ಯಸ್ಥ ಅರವಿಂದ್ ಕೇಜ್ರಿವಾಲ್ ಕೂಡ, ಬಿಜೆಪಿ ನಾಯಕರು ಆಪ್ ಶಾಸಕರಿಗೆ 10-20ಕೋಟಿ ರೂ ಆಮಿಷ ಒಡ್ಡುತ್ತಿದ್ದಾರೆ ಎಂದು ಆರೋಪಿಸಿದ್ದರು. ಈಗ ಕುಮಾರ್ ವಿಶ್ವಾಸ್ ಬಿಜೆಪಿ ವಿರುದ್ಧ ಕಿಡಿಕಾರಿದ್ದಾರೆ.