ನವದೆಹಲಿ : ಮಾಧ್ಯಮಗಳಲ್ಲಿ ಪ್ರಸಾರವಾಗುವ ವಿಷಯಗಳ ಬಗ್ಗೆ ತೀವ್ರ ನಿಗಾ ವಹಿಸಲು ಆಮ್ ಆದ್ಮಿ ಸರ್ಕಾರ ಮಾಹಿತಿ ಮತ್ತು ಪ್ರಸರಣ ನಿರ್ದೇಶನಾಲಯಕ್ಕೆ ಆದೇಶ ನೀಡಿದೆ.
ತಮ್ಮ ಪಕ್ಷದ ವರ್ಚಸ್ಸನ್ನು ಕುಗ್ಗಿಸಲು ಮಾಧ್ಯಮಗಳು ಯತ್ನಿಸುತ್ತಿದೆ ಎಂದು ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಆರೋಪಿಸಿದ ಬೆನ್ನಲ್ಲೇ ಈ ಬೆಳವಣಿಗೆ ಕಂಡುಬಂದಿದೆ.
ಆಮ್ ಆದ್ಮಿ ಪಕ್ಷದ ಮುಖಂಡ ಕುಮಾರ್ ವಿಶ್ವಾಸ್ ಅಕ್ರಮ ಸಂಬಂಧ ಹೊಂದಿದ್ದಾರೆ ಎಂದು ಮಾಧ್ಯಮಗಳಲ್ಲಿ ಸುದ್ದಿ ಪ್ರಸಾರವಾಗಿತ್ತು. ಈ ಹಿನ್ನೆಲೆಯಲ್ಲಿ ಮಾಧ್ಯಮಗಳ ವಿರುದ್ಧ ವಾಗ್ದಾಳಿ ನಡೆಸಿದ್ದ ಅರವಿಂದ್ ಕೇಜ್ರಿವಾಲ್, ತಮ್ಮ ಪಕ್ಷದ ವರ್ಚಸ್ಸನ್ನು ಕುಗ್ಗಿಸಲು ಮಾಧ್ಯಮಗಳು ಸುಪಾರಿ ಪಡೆದಿವೆ ಎಂದು ಗಂಭೀರ ಆರೋಪ ಮಾಡಿದ್ದರು.
ಇದೀಗ ಮಾಧ್ಯಮಗಳಲ್ಲಿ ಬಿತ್ತರವಾಗುವ ಎಲ್ಲಾ ಸುದ್ದಿಗಳ ಬಗ್ಗೆಯೂ ನಿಗಾ ವಹಿಸಬೇಕೆಂದು ದೆಹಲಿ ಸರ್ಕಾರ ಮಾಹಿತಿ ಮತ್ತು ಪ್ರಸರಣ ನಿರ್ದೇಶನಾಲಯಕ್ಕೆ(ಡಿ.ಐ.ಪಿ) ಆದೇಶ ನೀಡಿದೆ. ಪ್ರಮುಖವಾಗಿ ಬೆಳಿಗ್ಗೆ 9ರಿಂದ ರಾತ್ರಿ 11ಗಂಟೆ ವರೆಗೆ ಪ್ರಸಾರವಾಗುವ ಸುದ್ದಿಗಳ ಬಗ್ಗೆ ಗಮನ ಹರಿಸಬೇಕೆಂದು ಆದೇಶದಲ್ಲಿ ತಿಳಿಸಲಾಗಿದೆ.
ಈವರೆಗೂ ಡಿ.ಐ.ಪಿ, ಪತ್ರಿಕೆಯಲ್ಲಿ ಪ್ರಕಟವಾದ ಸರ್ಕಾರಕ್ಕೆ ಸಂಬಂಧಿಸಿದ ಸುದ್ದಿಗಳನ್ನು ಮಾತ್ರ ಸಂಗ್ರಹಿಸುತ್ತಿತ್ತು. ದೆಹಲಿ ಸರ್ಕಾರದ ಆದೇಶದ ಹಿನ್ನೆಲೆಯಲ್ಲಿ ಇನ್ನು ಮುಂದೆ ಸುದ್ದಿವಾಹಿನಿಗಳಲ್ಲಿ ಬಿತ್ತರವಾಗುವ ಅಂಶಗಳ ಬಗ್ಗೆಯೂ ನಿಗಾವಹಿಸಬೇಕಿದೆ.