ಜೈಪುರ : ಭಾರತದಲ್ಲಿ ವಿಧ್ವಂಸಕ ಕೃತ್ಯಗಳನ್ನು ಎಸಗುವ ಉದ್ದೇಶದಿಂದ ಭಯೋತ್ಪಾದಕರು ರಾಜಸ್ಥಾನ ಗಡಿ ಮೂಲಕ ಭಾರತವನ್ನು ಪ್ರವೇಶಿಸುವ ಸಾಧ್ಯತೆ ಇದೆ ಎಂದು ಗುಪ್ತಚರ ಇಲಾಖೆ ಎಚ್ಚರಿಕೆ ನೀಡಿದೆ.
ಉಗ್ರರು ಭಾರತಕ್ಕೆ ನುಸುಳುವ ಬಗ್ಗೆ ಗೃಹ ಸಚಿವಾಲಯಕ್ಕೆ ಮಾಹಿತಿ ರವಾನೆಯಾಗಿದ್ದು ರಾಜಸ್ಥಾನದಲ್ಲಿ ಹೈ ಅಲರ್ಟ್ ಘೋಷಿಸಲಾಗಿದೆ. ಗೃಹ ಸಚಿವಾಲಯ ಸೂಚನೆ ಹಿನ್ನೆಲೆಯಲ್ಲಿ ರಾಜಸ್ಥಾನದ ಬಿಕಾನೇರ್ ವಲಯದ 4 ಜಿಲ್ಲೆಗಳಲ್ಲಿ ತೀವ್ರ ಕಟ್ಟೆಚ್ಚರ ವಹಿಸಿದ್ದು, ರಾಜಸ್ಥಾನದಲ್ಲಿ ಬಿಎಸ್ಎಫ್ ಪಡೆಯನ್ನು ನಿಯೋಜಿಸಲಾಗಿದೆ.
ಜಮ್ಮು ಮತ್ತು ಕಾಶ್ಮೀರದಲ್ಲಿ ಪಾಕಿಸ್ತಾನ ಸೈನಿಕರು ನಿರಂತರವಾಗಿ ಗುಂಡಿನ ದಾಳಿ ನಡೆಸಿ ಭಾರತದ ಗಮನವನ್ನು ಆ ಕಡೆ ಸೆಳೆದು ಇತ್ತ ರಾಜಸ್ಥಾನದ ಗಡಿ ಮೂಲಕ 15 ಭಯೋತ್ಪಾದಕರನ್ನು ಭಾರತದಲ್ಲಿ ಕಳುಹಿಸುವ ಹುನ್ನಾರ ಪಾಕಿಸ್ತಾನ ಮಾಡಿದೆ ಎನ್ನಲಾಗಿದೆ.
ಏತನ್ಮಧ್ಯೆ ಪಾಕಿಸ್ತಾನದೊಂದಿಗೆ ದ್ವಿಪಕ್ಷೀಯ ಮಾತುಕತೆ ನಡೆಸಬೇಕೆಂದು ಪಿಡಿಪಿ ಮುಖ್ಯಸ್ಥೆ ಮೆಹಬೂಬ ಮುಫ್ತಿ ಅಭಿಪ್ರಾಯಪಟ್ಟಿದ್ದಾರೆ.