ನವದೆಹಲಿ : ಇತ್ತೀಚೆಗಷ್ಟೇ ನೇಪಾಳದ ಜನತೆ ಮೋದಿ ಮೋಡಿಗೆ ಒಳಗಾಗಿದ್ದರು. ಇದೀಗ ಜಪಾನ್ ಜನತೆ ಸರದಿ. ಆ.30ರಂದು ಪ್ರಧಾನಿ ನರೇಂದ್ರ ಮೋದಿ ಜಪಾನ್ ಪ್ರವಾಸ ಆರಂಭಿಸಲಿದ್ದಾರೆ. ಇದಕ್ಕೂ ಮುನ್ನ ಮೋದಿ ಜಪಾನ್ ಜನತೆ ಹೃದಯ ಗೆದ್ದಿದ್ದಾರೆ
ಸಂಸತ್ ನಲ್ಲಿ ಭಾಷಣ ಮಾಡುವ ಮೂಲಕ ನೇಪಾಳೀಯರ ಹೃದಯ ಗೆದ್ದಿದ್ದ ಪ್ರಧಾನಿ ಇದೀಗ ಜಪಾನ್ ಭಾಷೆಯಲ್ಲಿಯೇ ಟ್ವೀಟ್ ಮಾಡುವ ಮೂಲಕ ಜಪಾನ್ ಜನತೆಯನ್ನು ಮೋಡಿ ಮಾಡಿದ್ದಾರೆ.
ತಮ್ಮ ಪ್ರವಾಸದ ಬಗ್ಗೆ ಭಾರಿ ಉತ್ಸುಕರಾಗಿರುವ ಅವರು ಭೇಟಿಗೆ 2 ದಿನ ಮೊದಲೇ ಜಪಾನ್ ಭಾಷೆಯಲ್ಲಿ ಮೋದಿ ಟ್ವೀಟ್ ಮಾಡಿದ್ದಾರೆ.
ಈ ಹಿಂದೆ(ಗುಜರಾತ್ ಸಿಎಂ ಆಗಿದ್ದಾಗ) ಜಪಾನ್ ಪ್ರವಾಸದ ನೆನಪನ್ನೂ ಮೋದಿ ಹಂಚಿಕೊಂಡಿದ್ದಾರೆ. ಜಪಾನ್ ನಲ್ಲಿರುವ ಗೆಳೆಯರು ನಾನು ಜಪಾನ್ ಭಾಷೆಯಲ್ಲೇ ಅವರೊಂದಿಗೆ ಮಾತನಾಡಬೇಕು ಎಂದು ಕೇಳಿದರು. ಹಾಗಾಗಿ ಈ ಟ್ವೀಟ್ ಮಾಡಿದ್ದೇನೆ. ತರ್ಜುಮೆ ಮಾಡಲೂ ಅವರು ನೆರವಾಗಿದ್ದಾರೆ. ಅದಕ್ಕಾಗಿ ಅವರಿಗೆ ಧನ್ಯವಾದಗಳು ಎಂದು ಟ್ವೀಟ್ನಲ್ಲಿ ಮೋದಿ ತಿಳಿಸಿದ್ದಾರೆ.
ಜಪಾನೀಯರಲ್ಲಿರುವ ನಾವೀನ್ಯತೆಯ ನಿಜಕ್ಕೂ ಶ್ಲಾಘನೀಯ. ಎರಡೂ ರಾಷ್ಟ್ರಗಳ ನಡುವಿನ ಪರಸ್ಪರ ಸಂಬಂಧವನ್ನು ಹೊಸ ಮಟ್ಟಕ್ಕೇರಿಸಲು ಜಪಾನ್ ಪ್ರವಾಸ ನೆರವಾಗಲಿದೆ ಎಂದು ಮೋದಿ ಹೇಳಿದ್ದಾರೆ. ಅಪ್ರತಿಮ ಭಾಷಾಭಿಮಾನಿಗಳಾದ ಜಪಾನ್ ಜನತೆ ಮೋದಿ ಟ್ವೀಟ್ ನಿಂದ ಪುಳಕಿತರಾಗಿದ್ದಾರೆ.
ಜಪಾನ್ ಪ್ರಧಾನಿ ಶಿನ್ಝೋ ಅಬೆ ಅವರೂ ಮೋದಿ ಟ್ವೀಟ್ ಗೆ ಪ್ರತಿಕ್ರಿಯೆ ನೀಡಿದ್ದು, ತಮ್ಮ ಹೃದಯದಲ್ಲಿ ಭಾರತಕ್ಕೆ ಅತ್ಯುನ್ನತ ಸ್ಥಾನ ಇರುವುದಾಗಿ ತಿಳಿಸಿದ್ದಾರೆ.